''ಸೂಪರ್!'' ಹೀಗೆ ಹೇಳಿದ್ದು ಮಾದಕ ನಟಿ ನಯನ ತಾರಾ. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಗ್ಲ್ಯಾಮರಸ್ ನಟಿ ನಯನತಾರಾ ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಬರಲು ಒಪ್ಪಿದ್ದು ಹಳೇ ಸಂಗತಿ ಬಿಡಿ. ಈಗಾಗಲೇ ಭರ್ಜರಿ ಖರ್ಚಿನಲ್ಲಿ ಚಿತ್ರದ ಫೋಟೋ ಶೂಟ್ ಕೂಡಾ ನಡೆದಿದೆ. ಫೋಟೋ ಶೂಟ್‌ನ ಸ್ಟಿಲ್‌ಗಳನ್ನೂ ಮಾಧ್ಯಮದ ಮಂದಿಗೆ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಇತ್ತೀಚೆಗೆ ನಯನತಾರಾ ಬೆಂಗಳೂರಿಗೆ ಬಂದು ಹೋಗಿದ್ದರು. ಹೋದ ಮೇಲೆ ಹೇಳಿದ ಮಾತು ''ಸೂಪರ್''!
ಕೈಯ ಸಂಕೇತವಿರುವ ಚಿತ್ರವಿರುವ ಹೆಸರೇ ಇಲ್ಲದ ಈ ಚಿತ್ರದ ಹೆಸರಿನ ಅರ್ಥವ್ನನು ಸೂಪರ್ ಎಂದೋ, ಮಸ್ತ್ ಎಂದೋ ಏನಾದರೂ ಅಂದುಕೊಳ್ಳಬಹುದು. ಅದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಆದ್ರೆ ಚಿತ್ರದ ಕಥೆಯಂತೂ ಸೂಪ್ಪರೋ ಸೂಪ್ಪರ್ ಅಂತಾರೆ ನಯನತಾರಾ.
ಬಹಳ ಹಿಂದಿನಿಂದಲೇ ನಯನತಾರಾಳನ್ನು ಕನ್ನಡಕ್ಕೆ ಕರೆತರಲು ಪ್ರಯತ್ನ ನಡೆದಿತ್ತಾದರೂ, ಇದೀಗ ಆಕೆ ಉಪ್ಪಿ ಜೊತೆ ನಟಿಸಲು ಒಪ್ಪಿದ್ದಾದರೂ ಯಾಕೆ ಎಂದರೆ ಆಕೆ ಹೇಳೋದು ಹೀಗೆ. ಉಪೇಂದ್ರ ನಿಜಕ್ಕೂ ಪ್ರಸಿದ್ಧ ನಟ. ಅಷ್ಟೇ ಅಲ್ಲ, ನಿರ್ಮಾಣ ಮಾಡುತ್ತಿರುವ ರಾಕ್‌ಲೈನ್ ವೆಂಕಟೇಶ್ ಅವರು ತುಂಬ ಖ್ಯಾತಿವೆತ್ತ ನಿರ್ಮಾಪಕರು. ಜೊತೆಗೆ ಉಪೇಂದ್ರ ಅವರು ಈ ಚಿತ್ರದ ಕಥೆಯನ್ನು ಕೇವಲ ಒಂದೇ ವಾಕ್ಯದ್ಲಲಿ ನನಗೆ ಇಮೈಲ್ ಮಾಡಿದ್ದರು. ಕಥೆಯ ಒಂದೇ ಲೈನ್ ಓದಿ ನನಗೆ ತುಂಬ ಇಷ್ಟವಾಯಿತು. ಹಾಗಾಗಿ ಚಿತ್ರಕ್ಕೆ ಒಕೆ ಅಂದೆ ಎನ್ನುತ್ತಾರೆ ನಯನತಾರಾ.
ಗ್ಲ್ಯಾಮರಸ್ ನಟಿ ಎಂಬ ಹೆಗ್ಗಳಿಕೆಯೇ ಇರುವ ನಯನತಾರಾಗೆ ಈ ಚಿತ್ರದಲ್ಲೂ ಅದೇ ಪಟ್ಟ ಮುಂದುವರಿಯುತ್ತಾ ಅಂದರೆ, ಆಕೆ ದೀರ್ಘವಾಗಿ ಆಲೋಚಿಸಿ, ಈ ಚಿತ್ರದಲ್ಲಿ ನನಗೊಬ್ಬ ಬ್ರಾಹ್ಮಣ ಹುಡುಗಿಯ ಪಾತ್ರ. ಇದರಲ್ಲಿ ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳುವ ಅವಕಾಶವೂ ಇದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ನಟನೆಗೆ ಉತ್ತಮ ಅವಕಾಶವಿದೆ. ಮುಂದಿನ ಕೆರಿಯರ್ ದೃಷ್ಟಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ನಾನು ನಟನೆಯತ್ತ ಹೆಚ್ಚು ಗಮನ ಕೊಡಬೇಕು ಎನ್ನುತ್ತಾರೆ.
WD
ಸದ್ಯಕ್ಕೆ ಆಕೆಯ ತಮಿಳು, ತೆಲುಗು ಹಾಗೂ ಮಳಯಾಳಂ ಚಿತ್ರಗಳು ಏಕಕಾಲದಲ್ಲಿ ಹಿಟ್ ಆಗಿವೆ. ಆದವನ್ ತಮಿಳಿನಲ್ಲಿ ಹಿಟ್ ಆದರೆ, ಅದುರ್ಸ್(ತೆಲುಗು) ಹಾಗೂ ಬಾಡಿಗಾರ್ಡ್(ಮಳಯಾಳಂ) ಚಿತ್ರಗಳೂ ಹಿಟ್ ಆಗಿವೆ.
ಸದ್ಯ ಸಿನಿಮಾ ರಂಗಕ್ಕೆ ಸಾಕಷ್ಟು ಹೊಸಬರ ಪ್ರವೇಶವಾಗುತ್ತಿದ್ದು, ಒಬ್ಬರಿಗಿಂತ ಒಬ್ಬರು ಹೆಚ್ಚು ಚೆಲುವನ್ನು ಹೊಂದಿರುವವರ ಆಗಮನವಾಗುತ್ತಿದೆ. ಆದರೆ ಅವರಲ್ಲಿ ಆ ಕಿಚ್ಚು ಮಾತ್ರ ಕಾಣಿಸುತ್ತಿಲ್ಲ. ಹಾಗಾಗಿ ಹೊಸಬರು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಮೇಲೇರಲು ಸಾಧ್ಯ ಎಂದು ಯುವ ನಟಿಯರಿಗೆ ನಯನತಾರಾ ಕಿವಿಮಾತು ಹೇಳುತ್ತಾರೆ.
ಸದ್ಯದಲ್ಲೇ ಮದುವೆಯಾಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿರುವ ಬಗ್ಗೆಯೂ ಗಾಸಿಪ್ ಹುಟ್ಟಿದೆಯಲ್ಲಾ ಎಂದರೆ ನಯನತಾರಾ ಅಷ್ಟೇ ತಣ್ಣಗಾಗಿ, ನೋಡಿ, ನಾನು ನನ್ನ ಗಾಸಿಪ್‌ಗಳಿಗೆಲ್ಲಾ ಸ್ಪಷ್ಟನೆ ಕೊಡುತ್ತಾ ಕೂರುವ ಅಭ್ಯಾಸವಿಲ್ಲ. ಹೆಚ್ಚು ಮಾತಾಡುವುದಿಲ್ಲ. ಸ್ಪಷ್ಟನೆ ಕೊಟ್ಟರೆ, ಆ ಸುದ್ದಿಯ ಪ್ರಚಾರ ಇನ್ನಷ್ಟು ಜಾಸ್ತಿಯಾಗುತ್ತದೆ. ಇನ್ನು ಚಿತ್ರರಂಗದ ನಿವೃತ್ತಿ ಬಗ್ಗೆ ಸದ್ಯಕ್ಕೆ ಯೋಚನೆಯಿಲ್ಲ. ಆದರೆ ಇಲ್ಲವೇ ಇಲ್ಲ ಎಂದು ಹೇಳಲಾರೆ. ನಾನು ಕೂಡಾ ಎಲ್ಲರಂತೆಯೇ ಸಮಾನ್ಯ ಹುಡುಗಿ. ನನಗೂ ಮದುವೆಯಾಗಿ ಸುಂದರ ಸುಖಕರ ಜೀವನ ನಡೆಸಬೇಕೆಂಬ ಆಸೆಯಿದೆ ಎನ್ನುತ್ತಾರೆ ಬೋಲ್ಡ್ ಅಂಡ್ ಬ್ಯೂಟಿಫುಲ್ ನಯನತಾರಾ.