ತಮಿಳು, ತೆಲುಗು ಚಿತ್ರರಂಗದ ಬಹು ಬೇಡಿಕೆಯ ಐಟಂ ಗರ್ಲ್ ಮುಮೈತ್ ಖಾನ್ ಕನ್ನಡ ಚಿತ್ರವೊಂದರ ಹಾಡಿಗೆ ತಮ್ಮ ಥಳುಕು ಬಳುಕು ಅರ್ಪಿಸಿದ್ದಾರೆ. ಮುಮೈತ್ ಮೈಮೋಡಿಗೊಳಗಾಗಿರುವ ಕನ್ನಡದ ಪಡ್ಡೆಗಳು ಈವರೆಗೆ ಕಣ್ಣು ಕಣ್ಣು ಬಿಟ್ಟು ಮುಮೈತ್ ಆಗಮನಕ್ಕಾಗಿ ತವಕಿಸುತ್ತಿದ್ದರು. ಆ ಪಡ್ಡೆಗಳೆಲ್ಲರ ಬಹುದಿನದ ಪೂಜೆಗೆ ಈ ಫಲ ದೊರೆತಿದೆ. ಹಾಗಾಗಿ ಪಡ್ಡೆಗಳಿಗೀಗ ನಿದ್ದೆಗೆಡುವ ಕಾಲ ಹತ್ತಿರ ಬಂದಿದೆ.
ಬಿ.ಬಸವರಾಜು ಹಾಗೂ ಎ.ವೆಂಕಟೇಶ್ ನಿರ್ಮಿಸುತ್ತಿರುವ ಶೌರ್ಯ ಚಿತ್ರಕ್ಕೆ ಹೆಜ್ಜೆ ಹಾಕುವ ಸಲುವಾಗಿ ಮುಮೈತ್ ಇಲ್ಲಿಗೆ ಆಗಮಿಸಿದ್ದರು. ಇದು ತೆಲುಗಿನ ಶೌರ್ಯಂ ಚಿತ್ರದ ರಿಮೇಕ್. ಚಿತ್ರದಲ್ಲಿ ಐಟಂ ಹಾಡೊಂದಕ್ಕೆ ದರ್ಶನ್ ಜೊತೆಗೆ ಮತ್ತು ಬರಿಸುವಂತೆ ಮೈಕುಣಿಸಿದ್ದಾರೆ ಈ ಮುಮೈತ್ ಖಾನ್. ಆ ಮೂಲಕ ಮತ್ತು ಬರುವ ಸರದಿ ಮುಮೈತ್ ಅಭಿಮಾನಿಗಳದ್ದು.
ಪ್ರದೀಪ್ ಅಂತೋಣಿ ನೃತ್ಯ ಸಂಯೋಜಿಸಿರುವ ಈ ಗೀತೆಯಲ್ಲಿ ಸಂಪತ್ ಕುಮಾರ್, ಜಾನ್ ಕೋಕಿನ್ ಹಾಗೂ ರಷ್ಯನ್ ನೃತ್ಯಗಾರರೂ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.