ಬಹುನಿರೀಕ್ಷಿತ, ವಿಷ್ಣು ಅವರ ಕೊನೆಯ ಚಿತ್ರ ಆಪ್ತರಕ್ಷಕದ ಹಲವಾರು ದೃಶ್ಯಗಳಲ್ಲಿ ಕಂಪ್ಯೂಟರ್ ಗ್ರಾಫಿಕ್ ತಂತ್ರಜ್ಞಾನವನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆಯಂತೆ. ಈ ಚಿತ್ರಕ್ಕಾಗಿ ಪಿ.ವಾಸು, ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿರುವ ಹಿರಿಯ ಕಲಾವಿದರ ಚಿತ್ರಗಳ ಹಲವು ತುಣುಕುಗಳನ್ನು ಗ್ರಾಫಿಕ್ ಮೂಲಕ ಅಂತಿಮ ಘಳಿಗೆಯಲ್ಲಿ ಜೋಡಣೆ ಮಾಡಿಸಿದ್ದಾರಂತೆ.
ಡಾ.ವಿಷ್ಣು ಅವರೊಂದಿಗೆ ನಟಿಸಿದ ಪ್ರಮುಖ ನಟರ ಛಾಯಾಚಿತ್ರ ಹಾಗೂ ಕ್ಲಿಪ್ಪಿಂಗ್‌ಗಳನ್ನು ಚೆನ್ನೈನಿಂದ ತರಿಸಿಕೊಂಡಿರುವ ಪಿ.ವಾಸು ಗ್ರಾಫಿಕ್ ಮುಖಾಂತರ ಆಪ್ತರಕ್ಷಕ ಚಿತ್ರಕ್ಕಾಗಿ ಹಾಡೊಂದನ್ನು ಸಿದ್ಧಪಡಿಸಿದ್ದಾರೆ.
ಆಪ್ತರಕ್ಷಕ ಚಿತ್ರಕ್ಕೆ ಕಡೇ ಘಳಿಗೆಯಲ್ಲಿ ಸಿದ್ಧಪಡಿಸಿರುವ ಈ ಗ್ರಾಫಿಕ್ ತಂತ್ರಜ್ಞಾನದ ಹಾಡಿನಲ್ಲಿ ಡಾ.ರಾಜ್‌ಕುಮಾರ್, ರಜನಿಕಾಂತ್, ಅನಂತನಾಗ್, ಶಂಕರ್‌ನಾಗ್ ಹಾಗೂ ಇನ್ನಿತರ ಕಲಾವಿದರು ಕಾಣಿಸಿಕೊಳ್ಳಲಿದ್ದಾರಂತೆ!!!
ಫೆ.18ಕ್ಕೆ ಬಿಡುಗಡೆ: ಫೆ.12ಕ್ಕೆ ಆಪ್ತರಕ್ಷಕ ಬಿಡುಗಡೆ ಕಾಣುತ್ತದೆ ಎಂಬ ನಿರೀಕ್ಷೆ ಇದ್ದರೂ ಅದು ಸುಳ್ಳಾಗಿದೆ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಫೆ.18ಕ್ಕೆ ಮುಂದೂಡಲಾಗಿದೆ.
ವಿಷ್ಣುವರ್ಧನ್ ನಿಧನದ ನಂತರ ಖಂಡಿತ ಚಿತ್ರ ಹಿಟ್ ಆಗುತ್ತದೆಂಬ ನಿರೀಕ್ಷೆಯಲ್ಲಿ ನಿರ್ಮಾಪಕರು ಹೆಚ್ಚಿನ ಆತ್ಮವಿಶ್ವಾಸದಿಂದ ಯಾವುದೇ ಪ್ರಚಾರ ಕೈಗೊಂಡಿಲ್ಲ ಎಂದು ದೂರಿರುವ ನೂರಾರು ವಿಷ್ಣು ಅಭಿಮಾನಿಗಳು ಚಿತ್ರ ವಿತರಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಭಿಮಾನಿಗಳ ಒತ್ತಡಕ್ಕೆ ಮಣಿದು ಸೂಕ್ತ ಪ್ರಚಾರ ಕೈಗೊಳ್ಳುವ ಮೂಲಕ ಮುಂದಿನ ವಾರ ಚಿತ್ರ ಬಿಡುಗಡೆಗೆ ನಿರ್ಮಾಪಕರು ಒಪ್ಪಿದ್ದಾರೆ ಎನ್ನಲಾಗಿದೆ.
ಆಪ್ತರಕ್ಷಕ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದರೂ, ಈವರೆಗೆ ಟಿವಿ ವಾಹಿನಿಗಳಿಗಾಗಲೀ, ಪತ್ರಿಕೆಗಳಿಗಾಗಲೀ, ಚಿತ್ರದ ವಿಡಿಯೋ ತುಣುಕುಗಳು ಹಾಗೂ ಸ್ಟಿಲ್‌ಗಳ ಮೂಲಕ ಜನರಿಗೆ ವಿಷಯ ರವಾನಿಸುವ ಕಾರ್ಯವನ್ನು ನಿರ್ಮಾಪಕರು ಮಾಡಿಲ್ಲ. ಈವರೆಗೆ ಟಿವಿ ವಾಹಿನಿಗಳಿಗೆ ಚಿತ್ರ ವಿಡಿಯೋ ತುಣುಕುಗಳುಳ್ಳ ಪ್ರೋಮೋವನ್ನೇ ಬಿಡುಗಡೆ ಮಾಡಿಲ್ಲ. ಯಾವ ಪ್ರಚಾರವೂ ಮಾಡದೆ ಏಕಾಏಕಿ ಚಿತ್ರ ಬಿಡುಗಡೆ ಮಾಡೋದು ಬೇಡ ಎಂಬುದೇ ವಿಷ್ಣುವರ್ಧನ್ ಅಭಿಮಾನಿಗಳ ಒತ್ತಾಯವಾಗಿತ್ತು.
ಆಪ್ತರಕ್ಷಕ ಈಗಾಗಲೇ ಸೆನ್ಸಾರ್‌ನಿಂದ ಯು ಸರ್ಟಿಫಿಕೆಟ್ ಪಡೆದಿದ್ದು, ಎರಡು ಸನ್ನಿವೇಷಗಳಿಗೆ ಕತ್ತರಿ ಪ್ರಯೋಗ ನಡೆದಿದೆ. ಚಿತ್ರ ಫೆ.18ಕ್ಕೆ ಬಿಡುಗಡೆ ಕಾಣಲಿದೆ.