ಯೋಗರಾಜ್ ಭಟ್ಟ ನಿರ್ದೇಶನದ ಮುಂಗಾರು ಮಳೆ ತೆಲುಗು ಹಾಗೂ ಬೆಂಗಾಲಿ ಭಾಷೆಗಳಲ್ಲಿ ರಿಮೇಕ್ ಆಗಿದ್ದಾಯಿತು. ಹಿಂದಿಯಲ್ಲೂ ರಿಮೇಕ್ ಆಗುವ ಸುಳಿವು ಸಿಕ್ಕಿದ್ದೂ ಆಯಿತು. ಇದೀಗ ತಮಿಳಿನ ಸರದಿ!
ಹೌದು. ಮುಂಗಾರು ಮಳೆ ತಮಿಳಿಗೆ ರಿಮೇಕ್ ಆಗುತ್ತಿದೆ. ವಿಶೇಷವೆಂದರೆ ಈ ಚಿತ್ರದ ನಾಯಕನಟನಾಗಿ ನಮ್ಮ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಅವರೇ ಆಯ್ಕೆಯಾಗಿದ್ದಾರೆ. ಹಾಗಾಗಿ ಆ ಮೂಲಕ ಗಣೇಶ್ ತಮಿಳಿಗೂ ಪಾದಾರ್ಪಣೆ ಮಾಡಲಿದ್ದಾರೆ. ಈವರೆಗೆ ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಮುಂಗಾರು ಮಳೆ ರಿಮೇಕ್ ಆದರೂ, ನಟರು ಹಾಗೂ ಚಿತ್ರತಂಡ ಸಂಪೂರ್ಣ ಬೇರೆಯೇ ಆಗಿತ್ತು. ಆದರೆ ಕನ್ನಡದಷ್ಟು ಯಶಸ್ಸು ಬೇರೆ ಭಾಷೆಯಲ್ಲಿ ಸಿಕ್ಕಲಿಲ್ಲ. ಹಿಂದಿಯಲ್ಲಿ ಚಿತ್ರ ನಿರ್ಮಾಣಕ್ಕೆ ಬೋನಿ ಕಪೂರ್ ಈ ಚಿತ್ರದ ಹಕ್ಕನ್ನು ಖರೀದಿಸಿದರೂ, ಚಿತ್ರ ಇನ್ನೂ ಸೆಟ್ಟೇರಿಲ್ಲ. ಈಗ ತಮಿಳಿಗೂ ಮಳೆ ಸುರಿಸುವ ಕಾಲ ಬಂದಿದೆ.
ಈಗ ತಮಿಳಿನ ಸೂರ್ಯಪ್ರಕಾಶ್ ರಾವ್ ಮುಂಗಾರು ಮಳೆ ಚಿತ್ರದ ಹಕ್ಕನ್ನು 1.5ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಚಿತ್ರ ಎಸ್ಪಿಆರ್ ಎಂಟರ್‌ಟೈನ್‌ಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿ ಹೊರಬರಲಿದೆ. ಚಿತ್ರಕ್ಕೆ ಮುಂಗಾರು ಮಳೆಯಲ್ಲೇ ನಟಿಸಿದ ಗಣೇಶ್ ಅವರನ್ನೇ ಹೀರೋ ಆಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ನಾಯಕಿ ಯಾರು ಎಂಬ ಬಗ್ಗೆ ಇನ್ನೂ ನಿಗದಿಯಾಗಿಲ್ಲ. ಚಿತ್ರ ನಿರ್ದೇಶಕನ ಸ್ಥಾನಕ್ಕೆ ಆಪ್ತರಕ್ಷಕ, ಆಪ್ತಮಿತ್ರ ಚಿತ್ರಗಳ ನಿರ್ದೇಶಕ ಪಿ.ವಾಸು ಅವರ ಹೆಸರು ಕೇಳಿ ಬರುತ್ತಿದೆಯಾದರೂ, ಆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಚಿತ್ರದ ಹೆಸರಿನ ಬಗ್ಗೆಯೂ ಮಾಹಿತಿ ಇಲ್ಲ.
ಮುಂಗಾರು ಮಳೆ ಚಿತ್ರ ಮಲ್ಟಿಪ್ಲೆಕ್ಸ್ ಒಂದರಲ್ಲಿ ಒಂದು ವರ್ಷಕ್ಕೂ ಹೆಚ್ಚು ದಿನ ಓಡಿದ (400 ದಿನಗಳು) ಭಾರತದ ಏಕೈಕ ಚಿತ್ರ ಎಂಬ ದಾಖಲೆ ಬರೆದ ಚಿತ್ರ. ಕನ್ನಡ ನೆಲದಲ್ಲಿ ವರ್ಷಗಳ ಕಾಲ ಮಳೆ ಸುರಿಸಿದ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಕನ್ನಡಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಜೊತೆಗೆ ಚಿತ್ರರಂಗದಲ್ಲೊಂದು ಹೊಸ ಮೈಲಿಗಲ್ಲು ಸೃಷ್ಟಿಸಿತು. 75 ಕೋಟಿಗಳಿಗೂ ಹೆಚ್ಚು ದುಡ್ಡನ್ನು ಬಾಕ್ಸ್ ಆಫೀಸಿನಲ್ಲಿ ಕೊಳ್ಳೆಹೊಡೆದ ಈ ಚಿತ್ರ ಹತ್ತು ಹಲವು ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿತು. 2006ರ ಅತ್ಯುತ್ತಮ ಚಿತ್ರ ಎಂಬ ಫಿಲಂಫೇರ್ ಪ್ರಶಸ್ತಿ, ಅತ್ಯುತ್ತಮ ಸಂಗೀತ ನಿರ್ದೇಶನ(ಮನೋಮೂರ್ತಿ) ಹಾಗೂ ಅತ್ಯುತ್ತಮ ನಿರ್ದೇಶನ (ಯೋಗರಾಜ್ ಭಟ್)ಕ್ಕೂ ಫಿಲಂಫೇರ್ ಪ್ರಶಸ್ತಿ ಗಳಿಸಿದೆ.