ಚೆಲುವಿನ ಚಿತ್ತಾರದ ಮೂಲಕ ಕನ್ನಡಿಗರ ಮನದಲ್ಲಿ ಚಿತ್ತಾರ ಬರೆದ ಹದಿಹರೆಯದ ಚೆಲುವೆ ಅಮೂಲ್ಯ ಇದೀಗ ರುಕ್ಕುವಾಗುತ್ತಿದ್ದಾಳೆ. ಸುನಿಲ್ ಮೊಕಾಶಿ ನಿರ್ದೇಶನದ ರುಕ್ಕು ಎಂಬ ಚಿತ್ರಕ್ಕೆ ಇದೀಗ ಅಮೂಲ್ಯ ಆಯ್ಕೆಯಾಗಿದ್ದು, ಐವರು ಅಣ್ಣಂದಿರ ಮುದ್ದಿನ ತಂಗಿಯ ಪಾತ್ರದಲ್ಲಿ ಅಮೂಲ್ಯ ನಟಿಸಲಿದ್ದಾರೆ.
ಎಸ್.ನಾರಾಯಣ್ ಅವರ ಚೆಲುವಿನ ಚಿತ್ತಾರದ ಮೂಲಕ ವ್ಯಾಪಕ ಪ್ರಚಾರ ಪಡೆದ ನಟಿ ಅಮೂಲ್ಯ ಆಮೇಲೆ ಚೈತ್ರದ ಚಂದ್ರಮ ಬರೆದರೂ ಯಶಸ್ಸು ಕೈಗೂಡಿ ಬರಲಿಲ್ಲ. ನಂತರ ನಂನಪಿರಲಿ ಚಿತ್ರದ ಖ್ಯಾತಿಯ ರತ್ನಜ ನಿರ್ದೇಶನದ ಪ್ರೇಮಿಸಂ ಚಿತ್ರದಲ್ಲಿ ಅಮೂಲ್ಯ ನಟಿಸಿದ್ದರು. ಆ ಚಿತ್ರವೂ ಈಗ ಬಿಡುಗಡೆಗೆ ಕಾದಿದೆ.
ಹೈಸ್ಕೂಲು ಮುಗಿಸುವವರೆಗೂ ಕೇವಲ ರಜೆಯಲ್ಲಷ್ಟೇ ನಟಿಸುತ್ತಿದ್ದ ಅಮೂಲ್ಯ ಈಗ ಮೌಂಟ್ ಕಾರ್ಮೆಲ್ ಕಾಲೇಜು ಸೇರಿದ ಮೇಲೆ ಕೊಂಚ ಬದಲಾಗಿದ್ದಾಳೆ. ಕಾಲೇಜಿಗೆ ರಜೆ ಹಾಕಿ ಇಷ್ಟವಾದ ಪಾತ್ರಕ್ಕೆ ತಲೆದೂಗುತ್ತಿದ್ದಾಳೆ. ಪ್ರಕಾಶ್ ರೈ ನಿರ್ದೇಶನದ ನಾನು ನನ್ನ ಕನಸು ಚಿತ್ರದ ಪ್ರಮುಖ ಪಾತ್ರವೂ ಕೂಡಾ ರಮ್ಯಾ ಕೈತಪ್ಪಿ ಅಮೂಲ್ಯ ಪಾಲಾಗಿದ್ದು ಅಮೂಲ್ಯಗೆ ಒಲಿದ ಕೆಲವು ಉತ್ತಮ ಅವಕಾಶಗಳ್ಲಲೊಂದು ಎಂದು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ.
ಅದೇನೇ ಇರಲಿ, ಅಮೂಲ್ಯಗೆ ಅವಕಾಶಗಳ ಬಾಗಿಲುಗಳು ಮಾತ್ರ ತೆರೆದೇ ಇವೆ ಎಂಬುದಕ್ಕೆ ರುಕ್ಕು ಸಾಕ್ಷಿ. ರುಕ್ಕು ಚಿತ್ರದಲ್ಲಿ ಖಳನಟ ಮುನಿ, ನಟಿ ಶ್ರುತಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.