ಸುದೀಪ್ ಅವರೊಂದಿಗೆ ರವಿಚಂದ್ರನ್, ಹಿಂದಿಯ ಖ್ಯಾತ ನಿರ್ದೇಶಕ ನಿರ್ಮಾಪಕರಾದ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವು ಕನ್ನಡದ ನಟನಟಿಯರು ಜಸ್ಟ್ ಮಾತ್ ಮಾತಲ್ಲಿ ಚಿತ್ರ ವೀಕ್ಷಿಸುತ್ತಿದ್ದಾಗ ಮೂವರು ಕಿರಿಯ ಕಲಾವಿದರು ಆಡಿಕೊಂಡು ನಕ್ಕರಂತೆ! ಈ ವಿಷಯ ಕೇಳಿದ ಸುದೀಪ್ ತುಂಬಾನೇ ಬೇಸರ ಮಾಡಿಕೊಂಡರಂತೆ.
ಅವರು ಸುದೀಪ್ ಬಗ್ಗೆ ಆಸೀನರಾಗಿದ್ದವರ ಮುಂದೆ ಅದೇನು ಮಾತಾಡಿಕೊಂಡರು ಎಂಬುದು ಮಾತ್ರ ಇನ್ನೂ ನಿಗೂಢ. ಆದರೆ ಕಿಚ್ಚ ಬೇಸರ ಮಾಡಿಕೊಂಡದ್ದು ಮಾತ್ರ ಸತ್ಯ.
ಅಂದಹಾಗೆ ಕಿಚ್ಚನ ಬಗ್ಗೆ ಆಡಿಕೊಂಡು ಲೇವಡಿ ಮಾಡಿದವರು ಯಾರು ಗೊತ್ತಾ? ಒಬ್ಬರು ಕನ್ನಡದ ಖ್ಯಾತ ನಟರೊಬ್ಬರ ಮಗನಾಗಿದ್ದು, ಈವರೆಗೆ ನಟಿಸಿದ ಬೆರಳೆಣಿಕೆಯ ಚಿತ್ರಗಳೆಲ್ಲವೂ ತೋಪೆದ್ದರೂ, ಸದ್ಯಕ್ಕೆ ಗಾಂಧಿನಗರದಲ್ಲಿ ತಳವೂರುವ ಕನಸು ಕಾಣುತ್ತಿರುವ ಹುಡುಗ. ಮತ್ತೊಬ್ಬರು, ಇತ್ತೀಚೆಗೆ ಮೂರ್ನಾಲ್ಕು ವರ್ಷದ ಕೆಳಗೆ ತೀರಾ ಹದಿ ವಯಸ್ಸಿನಲ್ಲಿ ಪುಟ್ಟ ಪಾತ್ರವೊಂದರಲ್ಲಿ ಮಿಂಚಿ ಮತ್ತೆ ಹೀರೋ ಆಗಿ ಭಡ್ತಿ ಪಡೆದು ಸದ್ಯ ಹಲವು ರಿಮೇಕ್ ಚಿತ್ರಗಳಲ್ಲಿ ಮಿಂಚುತ್ತಿರುವ ನಟನಂತೆ! ಮಗದೊಬ್ಬರು 'ಗೋಕುಲ'ಕ್ಕೆ ಬಂದು ಪ್ರಸ್ತುತ 'ರಾಜಧಾನಿ' ಸೇರಿಕೊಂಡಿರುವ ಹುಡುಗನಂತೆ!