ಯಾವಾಗಲೂ ಶಾಂತಮೂರ್ತಿಯಂತಿರುತ್ತಿದ್ದ ಶಿವರಾಜ್ ಕುಮಾರ್‌ಗೆ ಇದೀಗ ವಿಪರೀತ ಸಿಟ್ಟು ಬಂದಿದೆ. ಕೋಪದಿಂದ ತನ್ನ ವಿರುದ್ಧ ಬರೆದ ರಾಜ್ಯಮಟ್ಟದ ಪ್ರಮುಖ ಪತ್ರಿಕೆಯೊಂದರ ಪತ್ರಕರ್ತನ ಮೇಲೆ ವಿಪರೀತ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯಮಟ್ಟದ ಪ್ರಮುಖ ಕನ್ನಡ ಪತ್ರಿಕೆಯೊಂದರಲ್ಲಿ ಸಿನಿಮಾ ಪತ್ರಕರ್ತರೊಬ್ಬರು 'ಶಿವಣ್ಣ ಕೊಟ್ಟ ಸಾಲ' ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಲೇಖನದಲ್ಲಿ ನಿರ್ದೇಶಕ ಸಾಯಿಪ್ರಕಾಶ್ ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಶಿವಣ್ಣ ಏನು ಮಾಡಬೇಕು ಎಂಬ ವಿವರಗಳನ್ನು ಪತ್ರಕರ್ತ ನೀಡಿದ್ದರು. ಈ ಸಲಹೆಗಳು ಶಿವಣ್ಣ ಅವರಿಗೆ ಸಿಟ್ಟು ತರಿಸಿದೆ.
ತಮ್ಮ ಮನೆ ಶ್ರೀಮುತ್ತುವಿನಲ್ಲಿ ಚೆಲುವೆಯೇ ನಿನ್ನ ನೋಡಲು ಚಿತ್ರದ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ತಮ್ಮ ಸಿಟ್ಟನ್ನು ಹೊರಹಾಕಿದರು.
ತೀರ್ಪು ಕೊಡಲು ಅವರ್ಯಾರು?: ಯಾರು ಯಾರನ್ನೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನನ್ನ ಕೆರಿಯರ್ ಬಗ್ಗೆ ಅವರದ್ದೇ ತೀರ್ಪು ಕೊಡಲು ಅವರ್ಯಾರು? ನನ್ನ ಪತ್ನಿ ಗೀತಾ ಹಾಗೂ ನನ್ನ ಕುಟುಂಬದವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಲು ಇವರಿಗೇನು ಹಕ್ಕಿದೆ? ನಾನು ಖಂಡಿತಾ ಆ ಲೇಖನ ಬರೆದವರನ್ನು ಇಲ್ಲಿ ಕರೆಸುತ್ತೇನೆ. ಸಾಯಿ ಪ್ರಕಾಶ್ ಅವರು ಕೂಡಾ ಬರಲಿ. ಆ ಪತ್ರಕರ್ತ ತಾನು ಬರೆದ ವಿಷಯಗಳಿಗೆ ಸ್ಪಷ್ಟೀಕರಣ ನೀಡಲಿ. ಜೊತೆಗೆ ಯಾರು ಹೇಳಿ ಈ ಲೇಖನ ಬರೆಸಿದರು ಎಂದು ಹೇಳಲಿ. ಈ ಹಿನ್ನೆಲೆಯಲ್ಲಿ ಖಂಡಿತಾ ಇನ್ನೊಂದು ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಶಿವಣ್ಣ ಆ ಪತ್ರಕರ್ತನೊಬ್ಬನ ಮೇಲೆ ಬೆಂಕಿಯ ಮಾತುಗಳನ್ನಾಡಿದರು. ಈ ಮಾತುಗಳನ್ನಾಡುವಾಗ ಶಿವಣ್ಣ ಅವರಿಗೆ ಸಿಟ್ಟು ನೆತ್ತಿಗೇರಿತ್ತು. ಕಣ್ಣಂಚಿನಿಂದ ಹನಿಗಳು ಉದುರುತ್ತಿದ್ದವು.
ನನ್ನ ಬಳಿ ಆಟ ನಡೆಯೋಲ್ಲ: ಈಗ ನನ್ನ ಬಗ್ಗೆ ಬರೆದಿರುವ ಪತ್ರಕರ್ತ ಅಂದು ಗಾಳಿಪಟ ಚಿತ್ರದ ಬಗ್ಗೆ ಕೆಟ್ಟದಾಗಿ ಇದೇ ಪ್ರಮುಖ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಆಮೇಲೆ ಅವರದ್ದೇ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಚಿತ್ರಕಥೆ ಬರೆಯುವ ಅವಕಾಶ ಗಿಟ್ಟಿಸಿಕೊಂಡರು. ಇಂಥಾ ಆಟಗಳೆಲ್ಲಾ ನನ್ನ ಬಳಿ ನಡೆಯೋದಿಲ್ಲ ಅಂತ ಅವರು ಮೊದಲು ತಿಳಿದುಕೊಳ್ಳಲಿ ಎಂದು ಖಡಾಖಂಡಿತವಾಗಿ ಹೇಳಿದರು ಶಿವಣ್ಣ.
ಶಿವಣ್ಣ ಕೊಟ್ಟ ಸಾಲ ಹೆಸರಿನಡಿ ಪ್ರಕಟವಾಗಿದ್ದ ಆ ಲೇಖನದಲ್ಲಿ ಸಾಯಿಪ್ರಕಾಶ್ ಅವರ ಮುಂದಿನ ಚಿತ್ರದಲ್ಲಿ ಶಿವಣ್ಣ ಉಚಿತವಾಗಿ ನಟಿಸಿ, ತಮ್ಮ ಯುನಿಟನ್ನೂ ಉಚಿತವಾಗಿ ನೀಡಿ, ಹಲವು ನಟನಟಿಯರು ಹಾಗೂ ತಾಂತ್ರಿಕ ವರ್ಗದವರನ್ನೂ ಉಚಿತವಾಗಿ ಕೆಲಸ ಮಾಡಲು ಒಪ್ಪಿಸಿ, ಎಲ್ಲ ಖರ್ಚುಗಳನ್ನೂ ಶಿವಣ್ಣ ಅವರೇ ನೋಡಿಕೊಳ್ಳಲಿ ಎಂಬರ್ಥದಲ್ಲಿ ಸಲಹೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಣ್ಣ ಕೆಂಡಾಮಂಡಲವಾಗಿದ್ದರು.
ವಿಷ್ಣು ಬದುಕಿದ್ದಾಗ ಬರೆಯುವ ಧೈರ್ಯ ಯಾಕೆ ಇರಲಿಲ್ಲ?: ವಿಷ್ಣು ಅವರು ತೀರಿದ ನಂತರ ವಿಷ್ಣು ಹಾಗೂ ನಮ್ಮ ಕುಟುಂಬದ ಬಗೆಗಿನ ಸಂಬಂಧದ ಬಗ್ಗೆ ಕೆಳದರ್ಜೆಯ ಲೇಖನಗಳನ್ನು ಇದೇ ಪತ್ರಕರ್ತ ಬರೆದಿದ್ದರು. ವಿಷ್ಣು ಬದುಕಿದ್ದಾಗ ಬರೆಯುವ ಧೈರ್ಯ ಇವರಿಗ್ಯಾಕೆ ಇರಲಿಲ್ಲ? ನಮ್ಮ ಹಾಗೂ ವಿಷ್ಣು ಕುಟುಂಬದ ನಡುವಿನ ಬಾಂಧವ್ಯ ಚೆನ್ನಾಗಿದೆ ಅನ್ನೋದು ನಮಗೆ ಮಾತ್ರ ಗೊತ್ತು. ಗೊತ್ತಿದ್ದ ವಿಷಯ ಬರೆಯಬೇಕು. ಗೊತ್ತಿಲ್ಲದ್ದನ್ನು ಬರೆಯಬಾರದು ಎಂದು ಗುಡುಗಿದರು ಶಿವಣ್ಣ.
ಸಾಯಿಪ್ರಕಾಶ್ ಅವರು ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದಾಗ ನಾನು ಓಡೋಡಿ ಆಸ್ಪತ್ರೆಗೆ ಧಾವಿಸಿದ್ದೆ. ನನ್ನ ದೇಹವಿಡೀ ನಡುಗುತ್ತಿತ್ತು. ಕಣ್ಣಲ್ಲಿ ನೀರು ತರಿಸಿತ್ತು. ಸಾಯಿಗೋಸ್ಕರ ಇನ್ನೊಂದು ಸಿನಿಮಾ ಮಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ನಿರ್ಮಾಪಕರನ್ನು ಎಂದಿಗೂ ಬಿಟ್ಟುಕೊಡಬಾರದೆಂದು ಅಪ್ಪಾಜಿ ಯಾವತ್ತೂ ಹೇಳುತ್ತಿದ್ದರು. ಅವರ ಕಿವಿಮಾತನ್ನು ನಾವು ಪಾಲಿಸುತ್ತಿದ್ದೇವೆ ಕೂಡ. ನಾನು ಯಾವತ್ತೂ ನನ್ನಿಂದಲೇ ಸಿನಿಮಾ ಹಿಟ್ ಆಯಿತು ಎಂದು ಮಾತನಾಡಿಲ್ಲ. ನಾನು ಎಷ್ಟೋ ಹಿಟ್ ಚಿತ್ರಗಳನ್ನು ನೀಡಿದ್ದೇನೆ. ಆದರೆ ಹಿಟ್ ಚಿತ್ರಗಳನ್ನು ನೀಡಿದ ಮರುಕ್ಷಣದಿಂದಲೇ ಸಂಭಾವನೆಯನ್ನು ದಿಢೀರನೆ ಏರಿಸಿಲ್ಲ ಎಂದರು ಶಿವಣ್ಣ.
ದೇವರು ಕೊಟ್ಟ ತಂಗಿ ಚಿತ್ರಕ್ಕೆ ನಾನು ಇಷ್ಟೇ ಸಂಭಾವನೆ ಕೊಡಿರೆಂದು ಕೇಳಿರಲಿಲ್ಲ. ಸಾಯಿ ಕೊಟ್ಟದ್ದನ್ನು ತೆಗೆದುಕೊಂಡಿದ್ದೇನೆ ಅಷ್ಟೆ. ದೇವರು ಕೊಟ್ಟ ತಂಗಿ ಬಿಡುಗಡೆಯ ಸಮಯ ಸರಿಯಿರಲಿಲ್ಲ. ಮುಂದೂಡುವ ನನ್ನ ಸಲಹೆಯನ್ನು ಸಾಯಿ ಕೇಳಲಿಲ್ಲ ಎಂದು ನುಡಿದರು ಶಿವಣ್ಣ.