ಕನ್ನಡಿಗ, ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಸದ್ಯದಲ್ಲೇ ಮರುವಿವಾಹವಾಗಲಿದ್ದಾರೆ. ಈಗ್ಗೆ ಕೆಲ ತಿಂಗಳ ಹಿಂದಷ್ಟೇ ಪ್ರಕಾಶ್ ರೈ ತಮ್ಮ ಪತ್ನಿ ಲಲಿತಾ ಕುಮಾರಿ ಜೊತೆಗೆ ವಿಚ್ಛೇದನ ಪಡೆದಿದ್ದರು.
IFM
ಪ್ರಕಾಶ್ ರೈ ಕಳೆದೆರುಡು ವರ್ಷಗಳಿಂದ ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕಿಯಾಗಿರುವ ಪೋನಿ ವರ್ಮಾರನ್ನು ಪ್ರೀತಿಸುತ್ತಿದ್ದರು. ಈ ವಿಚಾರವೂ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದುಕೊಳ್ಳಲು ಕಾರಣ ಎನ್ನಲಾಗಿದೆ. ಪೋನಿ ವರ್ಮಾ ಇತ್ತೀಚೆಗಿನ ಬಿಲ್ಲೂ, ನಮಸ್ತೇ ಲಂಡನ್, ಚುಪ್ ಚುಪ್ ಕೇ, ಗರಂ ಮಸಾಲಾ ಮತ್ತಿತರ ಹಲವಾರು ಹಿಂದಿ ಚಿತ್ರಗಳಿಗೆ ನೃತ್ಯ ನಿರ್ದೇಶಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ಅವರ ಗುಝಾರಿಶ್‌ನಂತಹ ಹಲವು ಅತ್ಯುತ್ತಮ ಪ್ರಾಜೆಕ್ಟ್‌ಗಳೂ ಈಕೆಯ ಕೈಯಲ್ಲಿದೆ. ಹಾಗಾಗಿ ನೃತ್ಯ ನಿರ್ದೇಶನದಲ್ಲಿ ಈಕೆಗೆ ಉಜ್ವಲ ಭವಿಷ್ಯವಿದೆ ಎನ್ನಲಾಗುತ್ತಿದೆ.
ಕನ್ನಡಿಗನಾದರೂ, ಕನ್ನಡದ ಜೊತೆಗೆ ತಮಿಳಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿರುವ ಪ್ರಕಾಶ್ ರೈ ಇತ್ತೀಚೆಗಿನ ದಿನಗಳಲ್ಲಿ ಬಾಲಿವುಡ್ಡಿನಲ್ಲೂ ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಪೋನಿ ವರ್ಮಾರನ್ನು ಪ್ರೀತಿಸುತ್ತಿರುವ ಪ್ರಕಾಶ್ ರೈ ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಆದರೆ ಅಧಿಕೃತವಾಗಿ ಈ ವಿಚಾರ ಇನ್ನೂ ಹೊರಬಿದ್ದಿಲ್ಲ. ಹಾಗಾಗಿ ಮದುವೆ ಯಾವಾಗ ಅನ್ನೋದು ಇನ್ನೂ ಸೀಕ್ರೆಟ್!