ಅಣ್ಣಾವ್ರು ಎಂದೇ ಪ್ರೀತಿಯಿಂದ ಕರೆಯಲ್ಪಡುವ ಡಾ.ರಾಜ್ ಕುಮಾರ್ ಅಭಿನಯದ ಆಕಸ್ಮಿಕ, ಹೊಸಬೆಳಕು, ಶ್ರೀನಿವಾಸ ಕಲ್ಯಾಣ, ಭಕ್ತಕುಂಬಾರ, ಒಂದು ಮುತ್ತಿನ ಕಥೆ ಮತ್ತಿತರ ಕೆಲವು ಚಿತ್ರಗಳ ಗೆಟಪ್ಪಿನಲ್ಲೀಗ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಜ್ಜಾಗಿದ್ದಾರೆ. ಶಿವಣ್ಣ ತಮ್ಮ ಮುಂಬರುವ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಡಾ.ರಾಜ್ ಅವರಂತೆಯೇ ಕಾಣಿಸಿಕೊಳ್ಳಲಿದ್ದಾರೆ.
ರಾಜ್ ಅಭಿನಯದ 'ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು...' ಎಂಬ ಜನಪ್ರಿಯ ಗೀತೆಯನ್ನು ರಿಮಿಕ್ಸ್ ಮಾಡಿ ಹರಿಕೃಷ್ಣ ಹೊಸದಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ರಿಮಿಕ್ಸ್ ಹಾಡಿನಲ್ಲಿ ಎರಡು ಫ್ರೇಮ್‌ಗಳಲ್ಲಿ ಡಾ.ರಾಜ್ ಹಾಗೂ ಮಗ ಶಿವಣ್ಣ ಹೆಜ್ಜೆಹಾಕಲಿದ್ದಾರೆ. ತಾಂತ್ರಿಕತೆಯ ಮೂಲಕ ಹಳೆಯ ರಾಜ್ ಹಾಗೂ ಈಗಿನ ಶಿವರಾಜ್ ಇಬ್ಬರೂ ಒಂದೇ ಹಾಡಿನಲ್ಲಿ ನರ್ತಿಸುವುದನ್ನು ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಕಾಣಬಹುದು. ಇಬ್ಬರೂ ಒಂದೇ ಗೆಟಪ್ಪಿನಲ್ಲಿ.
ಭಕ್ತಪ್ರಹ್ಲಾದ ಚಿತ್ರದ ಹಿರಣ್ಯ ಕಶಿಪು ಪಾತ್ರದ ಗೆಟಪ್‌ನಲ್ಲೂ ಶಿವಣ್ಣ ಕಾಣಿಸಲಿದ್ದಾರೆ. ಥೇಟ್ ರಾಜ್ ಥರಹದ ಆಂಗಿಕ ಅಭಿನಯವನ್ನೂ ಶಿವಣ್ಣ ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ!