ಮತ್ತೆ ಚಿತ್ರರಂಗಕ್ಕೆ ಧುಮುಕಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
NRB
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಧುಮುಕಿದ್ದಾರೆ. ರಾಜಕೀಯ ರಂಗಕ್ಕೆ ಕಾಲಿಡುವ ಮೊದಲು ಕುಮಾರಸ್ವಾಮಿ ಸಕ್ರಿಯವಾಗಿದ್ದುದು ಚಿತ್ರರಂಗದಲ್ಲಿ. ಆದರೆ ರಾಜಕೀಯದಲ್ಲಿ ಗುರುತಿಸಿಕೊಂಡ ನಂತರ ಚಿತ್ರರಂಗಕ್ಕೆ ಗಮನ ಕೊಟ್ಟಿರಲಿಲ್ಲ. ಆದರೀಗ ಮತ್ತೆ ಕುಮಾರಸ್ವಾಮಿ ಚಿತ್ರರಂಗಕ್ಕೆ ಮರಳಿದ್ದಾರೆ. ಎಸ್. ನಾರಾಯಣ್ ನಿರ್ದೇಶನದಲ್ಲಿ ಹೆಸರಿಡದ ಚಿತ್ರವೊಂದರ ನಿರ್ಮಾಣವನ್ನು ಅವರು ಕೈಗೆತ್ತಿಕೊಂಡಿದ್ದಾರೆ.
MOKSHA
ಈ ಹಿಂದೆ ಎಸ್.ನಾರಾಯಣ್ ಜೊತೆಗೆ ಕುಮಾರಸ್ವಾಮಿಯವರ ಸುದೀರ್ಘ ನಂಟಿತ್ತು. ಎಸ್. ನಾರಾಯಣ್ ನಿರ್ದೇಶನದ ಐದು ಚಿತ್ರಗಳಿಗೆ ಕುಮಾರಸ್ವಾಮಿ ಹಣ ಸುರಿದಿದ್ದರು. ಗಲಾಟೆ ಅಳಿಯಂದ್ರು, ಸೂರ್ಯವಂಶ, ಚಂದ್ರಚಕೋರಿ, ಜಿತೇಂದ್ರ, ಪ್ರೇಮೋತ್ಸವ ಚಿತ್ರಗಳೆಲ್ಲವೂ ಎಸ್.ನಾರಾಯಣ್ ಹಾಗೂ ಕುಮಾರಸ್ವಾಮಿ ಜೋಡಿಯ ಬತ್ತಳಿಕೆಯಿಂದ ಹೊರಬಂದ ಚಿತ್ರಗಳು.
ಆದರೀಗ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಹೆಸರಿಟ್ಟು ಆಗಿಲ್ಲವಂತೆ. ನಾಯಕಿಯ ಸ್ಥಾನಕ್ಕೆ ಪೂಜಾ ಗಾಂಧಿಯ ಹೆಸರು ಕೇಳಿ ಬರುತ್ತಿದೆ. ಆದರೆ ನಾಯಕ ನಟ ಇನ್ನೂ ಪಕ್ಕಾಗಿಲ್ಲವಂತೆ. ಕುಮಾರಸ್ವಾಮಿ ಅವರ ಪತ್ನಿ ಒಡೆತನದ ಕಸ್ತೂರಿ ಚಾನಲ್‌ನ ರಿಯಾಲಿಟಿ ಶೋ ಒಂದಕ್ಕೆ ಪೂಜಾ ಸಹಿ ಹಾಕಿದ್ದಾರೆ. ಈ ರಿಯಾಲಿಟಿ ಶೋ ಮೂಲಕವೇ ಪೂಜಾ ತನ್ನ ಹೀರೋ ಆಯ್ಕೆಯನ್ನು ನಡೆಸುತ್ತಾರೆಂಬ ಸುದ್ದಿಯೂ ಇದೆ. ಯಾವುದಕ್ಕೂ ಸ್ವಲ್ಪ ಸಮಯ ಕಾಯಬೇಕು.