ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ತನ್ನ ಅಪ್ಪನಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅಪ್ಪ ತನ್ನ ಕಣ್ಣನ್ನು ದಾನ ಮಾಡಿದ್ದರೆ, ಮಗ ತನ್ನ ದೇಹವನ್ನೇ ದಾನ ಮಾಡಿದ್ದಾರೆ.
ತನ್ನ ಮರಣಾನಂತರ ದೇಹವನ್ನು ವೈದ್ಯಕೀಯ ಪ್ರಯೋಗಾಲಯಕ್ಕೆ ದಾನ ಮಾಡುತ್ತೇನೆಂದು ಈ ಹಿಂದೆಯೇ ಘೋಷಣೆ ಮಾಡಿದ್ದ ಶಿವರಾಜ್ ಕುಮಾರ್ ತಮ್ಮ ಮಾತಿನಂತೆ ನಡೆದಿದ್ದಾರೆ ಕೂಡಾ. ನೇತ್ರದಾನಕ್ಕಿಂತಲೂ ಶ್ರೇಷ್ಠವಾದ ದಾನ ದೇಹದಾನ. ನನ್ನ ದೇಹ ನನ್ನ ಮರಣಾ ನಂತರ ಬೂದಿಯಾಗಿ ಹೋಗೋದು ಬೇಡ. ಅದು ವೈದ್ಯಕೀಯ ಪ್ರಯೋಗಕ್ಕೆ ಲಭ್ಯವಾಗಿ ಉಪಕಾರವಾಗಲಿ ಎಂದಿರುವ ಶಿವಣ್ಣ ತನ್ನ ದೇಹದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಸತ್ತ ಮೇಲೆ ತನ್ನ ದೇಹ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜು ಹಾಗೂ ಆಸ್ಪತ್ರೆಗೆ ಸೇರಿದ್ದು ಎಂದು ಶಿವಣ್ಣ ಘೋಷಿಸಿದ್ದಾರೆ.
ಶಿವಣ್ಣ ಅವರಿಗೆ ದೇಹದಾನಕ್ಕೆ ಪ್ರೇರಣೆ ನೀಡಿದ್ದು ಅವರ ನಟನೆಯ ಸುಗ್ರೀವ ಚಿತ್ರವಂತೆ. ಸುಗ್ರೀವದಲ್ಲಿ ಮಗನ ಪ್ರಾಣ ಉಳಿಸಲು ಅಪ್ಪನ ಪಾತ್ರ ಮಾಡಿದ ಶಿವಣ್ಣ ತನ್ನ ಹೃದಯವನ್ನೇ ದಾನ ಮಾಡುತ್ತಾರೆ. ಚಿತ್ರದಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಸಂದೇಶ ನೀಡಲಾಗಿದೆ. ಅದರಂತೆ ತಾನು ದೇಹದಾನದ ನಿರ್ಧಾರ ಕೈಗೊಂಡೆ ಎಂದು ಶಿವಣ್ಣ ಹೇಳುತ್ತಾರೆ. ಈ ಹಿಂದೆ ಹಿರಿಯ ನಟ ಲೋಕೇಶ್ ಕೂಡಾ ಇದೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ತಮ್ಮ ದೇಹವನ್ನು ದಾನವಾಗಿ ನೀಡಿದ್ದರು.