'ಸಿದ್ಧಲಿಂಗು'ವಿಗೆ ರಮ್ಯಾ ಒಲಿದಿದ್ದಾರೆ. ನಿರ್ದೇಶಕ ವಿಜಯ ಪ್ರಸಾದ್ ಅವರ ಸಿದ್ಧಲಿಂಗು ಚಿತ್ರದ ಕಥೆಯಿಂದ, ಹಾಗೂ ನಿರ್ದೇಶಕರ ದೃಢ ನಿಲುವಿನ ಮನೋಸ್ಥಿತಿಯಿಂದ ರಮ್ಯಾ ಹರ್ಷ ಹೊಂದಿದ್ದು, ಅವರ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಬಿಡುಗಡೆ ಕಾಣಬೇಕಿರುವ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ರಮ್ಯಾ ಜೊತೆಗಿನ ನಟಿಸಿದ ಶ್ರೀನಗರ ಕಿಟ್ಟಿ ಸಿದ್ಧಲಿಂಗುವಿನಲ್ಲಿ ರಮ್ಯಾಗೆ ಜೋಡಿಯಾಗಲಿದ್ದಾರೆ.
ರಮ್ಯಾ ಮತ್ತು ನಾನು ಇನ್ನೊಂದು ಚಿತ್ರಕ್ಕೆ ಸಹಿ ಮಾಡಿರೋದು ನಿಜ. ಈ ಚಿತ್ರ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸುವುದು ಖಂಡಿತ ಎನ್ನುವ ಶ್ರೀನಗರ ಕಿಟ್ಟಿ, ತನಗೆ ಚಿತ್ರದ ಕಥೆ ತುಂಬಾ ಇಷ್ಟವಾಯಿತು ಅದಕ್ಕೇ ಚಿತ್ರದಲ್ಲಿ ನಟಿಸಲು ಒಪ್ಪಿದೆ ಎನ್ನುತ್ತಾರೆ.
ರಮ್ಯಾ ಕೂಡಾ ಕಥೆಯತ್ತ ಆಕರ್ಷಿತರಾಗಿ ಒಕೆ ಅಂದಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಶಿಕ್ಷಕಿಯಾದರೆ, ಶ್ರೀನಗರ ಕಿಟ್ಟಿ ಹಳ್ಳಿಹೈದನಂತೆ! ಮೇ ತಿಂಗಳಲ್ಲಿ ಚಿತ್ರ ಸೆಟ್ಟೇರುವ ಲಕ್ಷಣಗಳಿವೆ.