ನಟ ರಮೇಶ್ ಅರವಿಂದ್ ಹಾಗೂ ನಟಿ ಮೀನಾ ಇಬ್ಬರೂ ಇದೀಗ ಗಂಡಂದಿರೇ ಹುಷಾರ್ ಎನ್ನುತ್ತಿದ್ದಾರೆ. ಇದ್ಯಾಕೆ ಇವರು ಹೀಗೆನ್ನುತ್ತಿದ್ದಾರೆ ಅಂತೀರಾ? ವಿಷಯ ಸಿಂಪಲ್. ರಮೇಶ್ ಹಾಗೂ ಮೀನಾ ಜೋಡಿಯಲ್ಲಿ ಹೆಂಡ್ತೀರ್ ದರ್ಬಾರ್ ಎಂಬ ಚಿತ್ರವೀಗ ಹೊರಬರುತ್ತಿದೆ. ಆಧುನಿಕ ಯುಗದಲ್ಲಿ ಏನಿದ್ದರೂ ಹೆಂಡತಿಯದ್ದೇ ಕಾರುಬಾರು ಎಂಬುದನ್ನೇ ಕಥಾವಸ್ತುವನ್ನಾಗಿಟ್ಟುಕೊಂಡು ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಗಂಡಂದಿರೇ ಹುಷಾರ್ ಎಂಬ ಟ್ಯಾಗ್‌ಲೈನ್ ಕೂಡಾ ಇದೆ.
ಮೈ ಆಟೋಗ್ರಾಫ್ ಚಿತ್ರ ನಟಿಸಿ ಹೋದ ಬಳಿಕ ಮೀನಾ ಮತ್ತೊಮ್ಮೆ ಕನ್ನಡದಲ್ಲಿ ದರ್ಬಾರ್ ನಡೆಸಲು ಬಂದಿದ್ದಾರೆ. ಮದುವೆಯಾದ ಬಳಿಕ ಇವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಹಲವು ಆಫರ್‌ಗಳು ಬಂದರೂ ಒಪ್ಪಿಕೊಳ್ಳದ ಮೀನಾ ಅವರಿಗೆ ದರ್ಬಾರ್ ತುಂಬಾ ಇಷ್ಟವಾಯಿತಂತೆ.
ಎಂಥ ಪಾತ್ರಕ್ಕೂ ಒಗ್ಗುವ ರಮೇಶ್ ಇಲ್ಲಿ ಹೆಂಡತಿ ಹೇಳಿದ್ದನ್ನು ತಂದುಕೊಡುವ ಹಾಗೂ ತಂದುಕೊಡದಿದ್ದಾಗ ಅವಳ ಮುನಿಸಿಗೆ ಒಳಗಾಗುವ ಪಾತ್ರ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಪ್ರೇಕ್ಷಕರು ಇಷ್ಟಪಡುವ ಎಲ್ಲಾ ಪಾತ್ರಗಳು ಚಿತ್ರದಲ್ಲಿದೆ ಎನ್ನುತ್ತಾರೆ ರಮೇಶ್. ಇವರ ಜತೆಗೆ ಪ್ರೇಕ್ಷಕರನ್ನು ನಕ್ಕು ನಗಿಸಲು ರಂಗಾಯಣ ರಘು ಕೂಡಾ ಇದ್ದಾರೆ.
ಈ ಚಿತ್ರದ ಮೂಲಕ ರಂಗಭೂಮಿಯ ಅಂಬಿಕಾ ಎಂಬುವವರು ಸಿನಿಮಾಕ್ಕೆ ಪರಿಚಯವಾಗುತ್ತಿದ್ದಾರೆ. ಇವರ ನಾಟಕ ನೋಡಿ ಖುಷಿಯಾದ ನಿರ್ಮಾಪಕರು ಈ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ.