ರಾಮ್ ಚಿತ್ರದ ಹೊಸ ಗಾನ ಬಜಾನಾ... ಹಳೆ ಪ್ರೇಮ ಪುರಾಣ... ಹಾಡಂತೂ ಈಗ ಕನ್ನಡ ನಾಡಿನ ಗಲ್ಲಿ ಗಲ್ಲಿಯಲ್ಲೂ ಕೇಳಿ ಬರುತ್ತಿದೆ. ಇದೀಗ ಇದೇ ಹೆಸರಿನ ಚಿತ್ರವೊಂದು ಬರಲಿದೆ. ಅದು 'ಗಾನ ಬಜಾನ'.
ಪಾತ್ರದ ಆಯ್ಕೆಯಲ್ಲಿ ಸ್ವಲ್ಪ ಚ್ಯೂಸಿ ಎಂದು ಕರೆಯಲ್ಪಡುವ ಮೊಗ್ಗಿನ ಮನಸಿನ ಭರವಸೆಯ ಪ್ರತಿಭೆ ರಾಧಿಕಾ ಪಂಡಿತ್ ಈ ಚಿತ್ರದ ನಾಯಕಿ. ಇವರ ಜೊತೆಗೆ ಗಾನ ಬಜಾಯಿಸಲು ಲವ್‌ಗುರು ಚಿತ್ರದ ಇವರ ಜೋಡಿ ತರುಣ್ ಇಲ್ಲೂ ಜೋಡಿಯಾಗಿದ್ದಾರೆ. ಇವರಿಬ್ಬರ ಜೋಡಿಯ ಮೊದಲ ಚಿತ್ರ ಲವ್‌ಗುರು ಚಿತ್ರಕ್ಕೆ ಉತ್ತಮ ಅಭಿಪ್ರಾಯ ಕೇಳಿ ಬಂದರೂ, ಮಾರುಕಟ್ಟೆಯಲ್ಲಿ ಹೆಚ್ಚು ಹೆಸರು ಮಾಡಿಲ್ಲ. ಇದೀಗ ಈ ಜೋಡಿ ಮತ್ತೆ ಒಂದಾಗಿದ್ದಾರೆ.
ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. ಇತ್ತೀಚೆಗಷ್ಟೇ ಕವಿರಾಜ್ ರಚನೆಯ 'ಹೊಸದೊಂದು ಹೆಸರಿಡು ನನಗೆ, ನಿನಗಿಷ್ಟವಾಗುವ ಹಾಗೆ..' ಎಂಬ ಹಾಡಿಗೆ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶಿಸುತ್ತಿದ್ದು, ಲವ್‌ಗುರು ಚಿತ್ರದ ಬಹುತೇಕ ತಂತ್ರಜ್ಞರು ಈ ಚಿತ್ರತಂಡದಲ್ಲೂ ಭಾಗವಹಿಸುತ್ತಿದ್ದಾರೆ.