ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರ ವೀರಪರಂಪರೆಗೆ ನಾಯಕಿಯ ಆಯ್ಕೆ ನಡೆಯುತ್ತಿದೆ. ಅದಕ್ಕಾಗಿ 3 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಯುವತಿಯರು ಅರ್ಜಿ ಸಲ್ಲಿಸಿದ್ದು ಹಳೇ ವಿಷಯ. ಇದೀಗ ಈ ಚಿತ್ರತಂಡದಿಂದ ಹೊಸದೊಂದು ಸುದ್ದಿ ಬಂದಿದೆ.
ಈ ಚಿತ್ರಕ್ಕೆ ಪಂಜಾಬ್ ಮೂಲದ ಪೂನಂ ಬಾಜ್ವಾ ನಾಯಕಿಯಾಗಲಿದ್ದರಂತೆ. ಈಗಾಗಲೇ ಹಲವು ಪರಭಾಷಾ ಚಿತ್ರಗಳಲ್ಲಿ ದ್ವಿತೀಯ ನಾಯಕಿಯಾಗಿ, ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಪೂನಂಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಅದೃಷ್ಟದ ಹುಡುಗಿ ಎಂದೇ ಹೆಸರಾಗಿರುವ ಈಕೆ ನಟಿಸಿರುವ ಬಹುತೇಕ ಚಿತ್ರಗಳು ಯಶಸ್ಸು ಕಂಡಿವೆ.
ಅದೆಲ್ಲಾ ಹಾಗಿರಲಿ, ವೀರಪರಂಪರೆಯಲ್ಲಿ ಕನ್ನಡದ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಎಸ್. ನಾರಾಯಣ್ ಈ ಹಿಂದೆ ಘೋಷಿಸಿದ್ದರು. ಹಾಗಾಗಿ ಪೂನಂ ಬಾಜ್ವಾ ಈ ಚಿತ್ರದ ನಿಜವಾದ ನಾಯಕಿಯೇ ಅಥವಾ ಇಲ್ಲೂ ಎರಡನೇ ನಾಯಕಿಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.