ಪೊಲೀಸ್ ವ್ಯವಸ್ಥೆಯ ಸುತ್ತ ತಿರುಗುವ ಚಿತ್ರ ಹುಲಿ. ಇದು ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ಮತ್ತೊಂದು ನಿರೀಕ್ಷೆಯ ಚಿತ್ರ. ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಶೋರ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಈ ಹಿಂದೆ ಈಶ್ವರ್ ಎಂಬ ಚಿತ್ರ ನಿರ್ದೇಶಿಸುತ್ತಿರುವಾಗಲೇ ಕಿಶೋರ್ಗೆ ಈ ಹುಲಿ ಕತೆ ಬಗ್ಗೆ ಹೇಳಿದ್ದರಂತೆ. ಚಿತ್ರದ ಗ್ಲ್ಯಾಮರ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಜೆನಿಫರ್ ನಾಯಕಿಯಾಗಿದ್ದಾರೆ.
ಚಿತ್ರಕ್ಕೆ ಈಕೆಯೇ ಸೂಕ್ತ ಅನ್ನಿಸಿ ಆಯ್ಕೆ ಮಾಡಿದ್ದಾಗಿ ಹೇಳುತ್ತಾರೆ ನಿರ್ದೇಶಕರು. ಅಷ್ಟೇ ಅಲ್ಲ. ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡುತ್ತಿದ್ದಾರೆ. ಅದಕ್ಕಾಗಿ ಕಿಶೋರ್ ಬೇರಾವ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲವಂತೆ. ಬೇರೆ ಚಿತ್ರಗಳಿಗೆ ಕಮಿಟ್ ಆದಲ್ಲಿ, ಇದಕ್ಕೆ ಹೆಚ್ಚು ಜೀವ ತುಂಬಲು ಆಗೋದಿಲ್ಲ ಎನ್ನುತ್ತಾರೆ ಅವರು.
ದುನಿಯಾ ಚಿತ್ರದ ಬಳಿಕ ಕಿಶೋರ್ ಪೊಲೀಸ್ ಪಾತ್ರದಲ್ಲಿ ಮಿಂಚಿದರು. ಆ ಬಳಿಕ ಅವರಿಗೆ ಹಲವು ಪಾತ್ರಗಳು ಬಂದಿದ್ದು ಪೊಲೀಸ್ ಅಧಿಕಾರಿಯದ್ದೇ. ನನಗೆ ಇಂಥದ್ದೇ ಪಾತ್ರಗಳು ಬೇಕು ಅನ್ನುವ ಹಂಬಲ ಇಲ್ಲ. ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ಜೀವ ತುಂಬುವುದೇ ನನ್ನ ಕೆಲಸ ಎನ್ನುವುದು ಅವರ ಅಂಬೋಣ.
ಅಂದಹಾಗೆ ನಿಜ ಜೀವನದಲ್ಲೂ ಇವರು ಪೊಲೀಸ್ ಅಧಿಕಾರಿಯಾಗಬೇಕೆಂದಿದ್ದರಂತೆ. ಅದಾಗಲಿಲ್ಲ. ಈಗ ಸಿನಿಮಾರಂಗದಲ್ಲಾದರೂ ಈ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನಲ್ಲ ಎಂಬ ತೃಪ್ತಿ ಅವರಲ್ಲಿದೆ.