ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ಅದು ದೊಡ್ಡ ಸಾಹಸವೇ ಸರಿ. ಅದೃಷ್ಟ ಬೆನ್ನತ್ತಿದರೆ ಮೊದಲ ಚಿತ್ರದಲ್ಲಿಯೇ ನಾಯಕಿ ಪಟ್ಟ. ಈ ಸಾಲಿಗೆ ಸೇರುವವರಲ್ಲಿ ಪ್ರಣೀತಾ ಕೂಡ ಒಬ್ಬಳು.
ಪೊರ್ಕಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎದುರು ನಾಯಕಿಯಾಗುವ ಅವಕಾಶ ದೊರೆತಾಗ ಈಕೆಯ ಅದೃಷ್ಟ ಕಂಡು ಅದೆಷ್ಟೋ ಉದಯೋನ್ಮುಖ ನಟಿಯರು ಹೊಟ್ಟೆಕಿಚ್ಚು ಪಟ್ಟಿದ್ದು ಸುಳ್ಳಲ್ಲ. ಈ ಚಿತ್ರದಲ್ಲಂತೂ ಮಾಧ್ಯಮಗಳು ಕೂಡ ಪ್ರಣೀತಾರನ್ನೇ ಹೆಚ್ಚು ಫೋಕಸ್ ಮಾಡಿದವು. ಇದಕ್ಕೆ ಸರಿಯಾಗಿ ಪ್ರಣೀತಾ ಕೂಡ ಒಪ್ಪಂದದ ಕಾರಣವೊಡ್ಡಿ ಹಲವು ಆಫರ್ಗಳನ್ನು ತಿರಸ್ಕರಿಸಿದ್ದರಂತೆ.
ಈಗ ಏನಪ್ಪಾ ಅಂದರೆ, ಈಕೆ ಇತ್ತೀಚೆಗೆ ಸೆಟ್ಟೇರಿದ ಚಿತ್ರವೊಂದರಲ್ಲಿ ನಿರ್ಮಾಪಕರು ನಾಯಕಿಯಾಗುವಂತೆ ಆಹ್ವಾನ ನೀಡಿದ್ದರಂತೆ. ಆದರೆ ಅದನ್ನು ಪ್ರಣೀತಾ ನಿರಾಕರಿಸಿದ್ದಾರೆ. ಕಾರಣ ಏನು ಗೊತ್ತೇ? ಸಣ್ಣಪುಟ್ಟ ಬ್ಯಾನರ್, ನಿರ್ದೇಶಕರ ಚಿತ್ರಗಳಲ್ಲಿ ನಟಿಸುವುದಿಲ್ಲ. ಅಷ್ಟೇ ಅಲ್ಲ. ಲೂಸ್ ಮಾದ, ಯಶ್ ಮೊದಲಾದವರ ಜೊತೆ ನಾನು ನಟಿಸುವುದಿಲ್ಲ. ನಾನೇನಿದ್ದರೂ ದೊಡ್ಡ ಸ್ಟಾರ್ಗಳ ಜೊತೆ ಮಾತ್ರ ನಟಿಸುವುದು ಎಂದು ಹೇಳಿದ್ದಾರೆ!
ಪರಭಾಷಾ ನಟಿಯರನ್ನು ಆಮದು ಮಾಡಿಕೊಂಡ ಎಷ್ಟೋ ಚಿತ್ರಗಳ ಹಿಂದೆ ಇಂಥದ್ದೊಂದು ನೋವಿನ ಕತೆಯಿರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಮುಂದಾದರೂ ಈ ಘಟನೆಗಳಿಂದ ಕನ್ನಡ ಚಿತ್ರರಂಗದ ನಿರ್ದೇಶಕರು- ನಿರ್ಮಾಪಕರು ಎಚ್ಚೆತ್ತುಕೊಳ್ಳುತ್ತಾರೋ ನೋಡಬೇಕು.