ಇತ್ತೀಚೆಗೆ ಭಾರೀ ಸುದ್ದಿ ಮಾಡಿದ ಮಾಡುತ್ತಿದ್ದ ಚಿಗರೆ ಕಂಗಳ ಬಳುಕುವ ಬಳ್ಳಿ ಐಂದ್ರಿತಾ ರೇ ಈಗ ಯಾಕೆ ಸುದ್ದಿ ಮಾಡದೆ ಸುಮ್ಮನಿದ್ದಾರೆ ಎಂದು ಯೋಚಿಸುತ್ತಿದ್ದಾರಾ? ಹೌದು. ಐಂದ್ರಿತಾ ರೇ ಸದ್ಯಕ್ಕೆ ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರಂತೆ.
ಮನಸಾರೆಯ ನಂತರ ಐಂದ್ರಿತಾ ಕಪಾಳಮೋಕ್ಷ ಪ್ರಕರಣ ಬಿಟ್ಟರೆ ಸುದ್ದಿ ಮಾಡಿದ್ದು ಕಡಿಮೆ. ಏಪ್ರಿಲ್ ತಿಂಗಳಲ್ಲಿ ಐಂದ್ರಿತಾ ಅಭಿನಯಿಸಿದ ನೂರು ಜನ್ಮಕೂ ಹಾಗೂ ನನ್ನವನು ಚಿತ್ರಗಳ ಬಿಡುಗಡೆಯೂ ಆಗುವ ನಿರೀಕ್ಷೆಯಿದೆ. ಜೊತೆಗೆ ಮನಸಿನ ಮಾತು ಚಿತ್ರವೂ ಕೂಡಾ ಮುಂದಿನ ತಿಂಗಳು ತೆರೆಗೆ ಬರುವ ಸಂಭವವಿದೆ. ಆದರೆ ಅದೆಲ್ಲಕ್ಕಿಂದ ಮೊದಲು ಐಂದ್ರಿತಾ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ. ಸದ್ಯಕ್ಕೆ ಶೂಟಿಂಗ್ ಬ್ಯುಸಿಯಲ್ಲಿ ಖಾಸಗಿ ಜೀವನವೇ ಸಿಕ್ಕಿಲ್ಲ. ಹಾಗಾಗಿ ತಾನು ಕೆಲವು ದಿನಗಳ ಕಾಲ ರಜೆಯಲ್ಲಿರಲಿದ್ದೇನೆ ಎಂದು ಐಂದ್ರಿತಾ ಹೇಳಿದ್ದಾರೆ.
ಹಾಗಾದರೆ ಕುಟುಂಬ ಸಮೇತರಾಗಿ ಎಲ್ಲಾದರೂ ಫಾರಿನ್ ಟೂರ್ ಹೋಗಲಿದ್ದಾರೋ ಎಂದರೆ ಆಕೆ, ಖಂಡಿತ ಇಲ್ಲ. ಸದ್ಯಕ್ಕೆ ಮನೆಯಲ್ಲೇ ಕೂತು ಮಸ್ತಾಗಿ ತಿಂದುಂಡು ಸ್ವಲ್ಪ ದಿನ ಹಾಯಾಗಿರುತ್ತೇನೆ. ಚಿತ್ರಗಳ ಆಫರ್ ಬಂದರೆ ನಿರ್ಮಾಪಕರ ಜೊತೆಗೆ ಮಾತುಕತೆ ನಡೆಸುತ್ತೇನೆ ಅಷ್ಟೆ. ಈ ಸಮಯದಲ್ಲಿ ಶೂಟಿಂಗ್ ಗೀಟಿಂಗ್ ಏನೂ ಇಲ್ಲ ಎಂದಿದ್ದಾಳೆ.