ಪ್ರತಿಭಾವಂತ ನಟಿ ತಾರಾ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಶುಕ್ರವಾರ (ಮಾ.5) ಸಂಭ್ರಮದಿಂದ ಆಚರಿಸಿಕೊಂಡರು. ಅರೆ!!! ತಾರಾಗೆ ಕೇವಲ 25 ವರ್ಷವೇ? ಬರೆದವರೆಲ್ಲೋ ತಪ್ಪಾಗಿ ಬರೆದಿರಬೇಕು ಅಂದುಕೊಂಡುಬಿಟ್ಟಿರಾ ಹೇಗೆ? ಹಾಗಾದರೆ ಪೂರ್ತಿ ಓದಿ.
ತಾರಾ ಶುಕ್ರವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಆಫ್ತರ ಜೊತೆಗೆ ಕೇಕ್ ಕತ್ತರಿಸಿದರು. ಹಾಗಾದರೆ ತಾರಾಗೆ ಇದು ಎಷ್ಟನೇ ಬರ್ತ್‌ಡೇ ಎಂದು ನೆರೆದಿದ್ದವರಿಗೆ ಸಂಶಯ ಬಾರದಿರಲಿಲ್ಲ. ನೇರವಾಗಿ ಕೆಲವು ಮಾಧ್ಯಮ ಮಿತ್ರರು ಕೇಳಿಯೂ ಬಿಟ್ಟರು. ಆದರೆ ತಾರಾ ಹೇಳೋ ಮನಸ್ಸು ಮಾಡಲಿಲ್ಲ. ಬಹುತೇಕ ನಟಿಯರು ತಮ್ಮ ವಯಸ್ಸಿನ ಸೀಕ್ರೆಟ್ ಬಿಟ್ಟುಕೊಡೋದು ಇಲ್ಲ ಬಿಡಿ. ಆದರೆ ತಾರಾ ಮಾತ್ರ ತನ್ನ ಎಷ್ಟನೇ ಬರ್ತ್‌ಡೇ ಎಂದು ನೇರವಾಗಿ ಹೇಳೋ ಬದಲು ಕೇಕ್ ಮೇಲೆ ಎಷ್ಟು ಬರೆದಿದೆಯೋ ಅಷ್ಟನೆಯದು ಅಂದು ಬಿಟ್ಟರು. ಎಲ್ಲರಿಗೂ ಕೇಕ್ ನೋಡುವ ಸಂಭ್ರಮ.
ಆದರೆ ಕೇಕ್‌ನಲ್ಲಿ 25 ಎಂದು ಬರೆದಿತ್ತು! ಅರೆ 25 ವಯಸ್ಸೇ, ತಾರಾ ಅಂದಿನಿಂದಲೇ ನಟಿಸಿಕೊಂಡು ಬಂದವರು. ಆದರೂ ಅವರಿಗೆ 25 ವಯಸ್ಸೆಲ್ಲ ಇರಲಿಕ್ಕಿಲ್ಲ ಅಂತ ಕೆಲವರು ತಲೆಕೆರೆದು ಕೊಂಡರು. ಆದರೆ ಸ್ವಲ್ಪ ಹೊತ್ತಿನಲ್ಲಿ ಗೊತ್ತಾಯಿತು, ತಾರಾ ಸಿನಿಮಾ ರಂಗಕ್ಕೆ ಬಂದು ಭರ್ಜರಿ 25 ವರ್ಷವಾಯಿತು ಎಂದು! ಅಂತೂ 25ರ ರಹಸ್ಯ ಬಯಲಾಯ್ತು. ಆದರೆ, ಕೊನೆಗೂ ಹಾಗಾದರೆ ನಿಮ್ಮದು ಇದು ಎಷ್ಟನೇ ಬರ್ತ್‌ಡೇ ಎಂದು ಮರುಪ್ರಶ್ನೆ ಹಾಕುವ ಗೋಜಿಗೆ ಹೋಗಲಿಲ್ಲ ಬಿಡಿ!!!