ಪುನೀತ್ ಈಗ ಒಂದಾದ ಮೇಲೊಂದು ಚಿತ್ರಗಳಲ್ಲಿ ನಟಿಸೋದರಲ್ಲಿ ಬ್ಯುಸಿ. ಇತ್ತೀಚೆಗಷ್ಟೆ ಜೋರ್ಡನ್‌ನಿಂದ ಪೃಥ್ವಿಯ ಕೊನೆಯ ಶೂಟಿಂಗ್ ಮುಗಿಸಿ ಬಂದ ತಕ್ಷಣ ಇಲ್ಲಿ ಜಾಕಿಗಾಗಿ ಪುನೀತ್ ಸಿದ್ಧವಾಗಿ ನಿಂತಿದ್ದಾರೆ.
ಪಾರ್ವತಿ ಮೆನನ್, ಮೀರಾ ಜಾಸ್ಮಿನ್, ನಿಶಾ ಕೊಠಾರಿ, ಪ್ರಿಯಾ ಮಣಿ ಹಾಗೂ ಮುಂಬರುವ ಚಿತ್ರಕ್ಕೆ ಭಾವನಾ ಮೆನನ್... ಹೀಗೆ ಪುನೀತ್ ಅವರ ಇತ್ತೀಚೆಗಿನ ಕೆಲವು ವರ್ಷಗಳ ಬಹುತೇಕ ಎಲ್ಲ ಚಿತ್ರಗಳಲ್ಲೂ ಪರಭಾಷಾ ನಟಿಯರೇ ನಟಿಸಿದ್ದಾರೆ. ಪುನೀತ್ ತಮ್ಮ ಚಿತ್ರಗಳಿಗೆ ತಾವೇ ನಾಯಕಿಯರನ್ನು ಆಯ್ಕೆ ಮಾಡುತ್ತಾರೆ ಎಂದೂ ಕೆಲವರು ಹೇಳುತ್ತಾರೆ ಇದು ನಿಜಾನಾ? ಎಂದು ನೇರವಾಗಿ ಪುನೀತ್ ಬಳಿ ಕೇಳಿದರೆ ಅವರು, ಇಲ್ಲ. ನಾಯಕಿಯರ ಆಯ್ಕೆ ನಾನು ಮಾಡೋದಿಲ್ಲ ಎಂದು ಒಂದೇ ಪೆಟ್ಟಿಗೆ ಉತ್ತರಿಸುತ್ತಾರೆ.
ನನ್ನ ಚಿತ್ರದಲ್ಲಿ ನಿರ್ದೇಶಕ ನಾಯಕಿಯರಿಗಾಗಿ ಕೊಂಚ ತಲಾಶ್ ನಡೆಸುತ್ತಾರೆ. ಅವರು ಶೋಧಿಸಿದ ಹುಡಿಯರೇ ನನ್ನ ಚಿತ್ರದ ನಾಯಕಿಯರು. ಚಿತ್ರಕ್ಕೆ ಎಂಥ ಮುಖದ ಅವಶ್ಯಕತೆ ಇದೆ ಅನ್ನೋದರ ಮೇಲೆ ಆಯ್ಕೆ ನಡೆಯುತ್ತದಷ್ಟೇ ಹೊರತು ನನ್ನ ನಿರ್ಧಾರದ ಮೇಲಲ್ಲ. ನನ್ನ ಚಿತ್ರಗಳ್ಲಲಿ ಈವರೆಗೆ ನಟಿಸಿದ ಮೀರಾ ಜಾಸ್ಮಿನ್, ನಿಶಾ ಕೊಠಾರಿ, ಪಾರ್ವತಿ ಮೆನನ್, ಪ್ರಿಯಾ ಮಣಿ ಇವರೆಲ್ಲರೂ ಕೂಡಾ ತುಂಬ ಪ್ರತಿಭಾನ್ವಿತರು ಎಂದು ಪುನೀತ್ ವಿವರಿಸುತ್ತಾರೆ.
ಪುನೀತ್ ತಮ್ಮ ಹೋಂ ಬ್ಯಾನರಿನಲ್ಲಿ ನಟಿಸದೆ ಎರಡು ವರ್ಷವಾಯ್ತು. ವಂಶಿ ಚಿತ್ರದ ನಂತರ ಇದೇ ಮೊದಲ ಬಾರಿಗೆ ಜಾಕಿಯ ಮೂಲಕ ಪುನೀತ್ ಹೋಂ ಬ್ಯಾನರಿನಲ್ಲಿ ನಟಿಸುತ್ತಿದ್ದಾರೆ. ಈಗ ಜಾಕಿ ಚಿತ್ರವನ್ನು ಹೋಂ ಬ್ಯಾನರಿನಡಿ ತರುತ್ತಿರುವುದಕ್ಕೆ ಏನಾದರೂ ಕಾರಣವಿದೆಯೇ ಎಂದರೆ ರಾಘವೇಂದ್ರ ರಾಜ್ ಕುಮಾರ್, ಹಾಗೇನೂ ಇಲ್ಲ. ಈ ಕಥೆ ಇಷ್ಟವಾಯ್ತು. ಹಾಗೆ ಹೋಂ ಪ್ರೊಡಕ್ಷನ್‌ನಡಿ ತರೋದಕ್ಕೆ ಚಿಂತಿಸಿದೆವು. ಮುಂದಿನ ಚಿತ್ರ ತಮಿಳಿನ ನಾಡೋಡಿಗಳ್‌ನ ಕನ್ನಡ ರಿಮೇಕ್ ಕೂಡಾ ನಮ್ಮ ಬ್ಯಾನರ್ ಅಡಿಯಲ್ಲೇ ಹೊರಬರಲಿದೆ ಎನ್ನುತ್ತಾರೆ ರಾಘವೇಂದ್ರ ರಾಜ್ ಕುಮಾರ್.
ಜಾಕಿ ಚಿತ್ರದಲ್ಲಿ ಹರಿಕೃಷ್ಣ ಸಂಗೀತವಿದೆ. ಹಲವು ಹಿಟ್ ಹಾಡುಗಳನ್ನು ಹರಿಕೃಷ್ಣ ನೀಡಿದ್ದಾರೆ. ಇತ್ತೀಚೆಗಿನ ನನ್ನ ಹಲವು ಚಿತ್ರಗಳಲ್ಲಿ ಹರಿಕೃಷ್ಣ ಸಂಗೀತವಿದೆ. ಈ ಚಿತ್ರಕ್ಕೂ ಅವರದೇ ಸಂಗೀತವಿದೆ ಎನ್ನುತ್ತಾರೆ ಪುನೀತ್.
ನಿರ್ದೇಶಕ ಸೂರಿ ಬಗ್ಗೆಯೂ ಸಾಕಷ್ಟು ಮೆಚ್ಚುಗೆಯ ಮಾತನ್ನಾಡುತ್ತಾರೆ ಪುನೀತ್. ಸೂರಿ ಒಬ್ಬ ಪ್ರತಿಭಾನ್ವಿತ ನಿರ್ದೇಶಕ. ಅವರು ಚಿತ್ರವೊಂದನ್ನು ತಯಾರಿಸುವ ರೀತಿಯೇ ಅಮೋಘವಾದುದು. ಅವರ ಚಿತ್ರ ದುನಿಯಾ ನನಗೆ ತುಂಬ ಇಷ್ಟವಾಯಿತು. ನಾನು ತಕ್ಷಣ ಅವರ ಅಭಿಮಾನಿಯಾಗಿಬಿಟ್ಟೆ. ಅವರು ತಮ್ಮೆಲ್ಲ ಚಿತ್ರಗಳನ್ನು ತಾಂತ್ರಿಕವಾಗಿ ನಿರ್ವಹಿಸುವ ರೀತಿ ನನಗೆ ತುಂಬ ಮೆಚ್ಚುಗೆಯಾದುದು. ಸೂರಿ ಖಂಡಿತವಾಗಿಯೂ ತಮ್ಮ ಜಾಕಿ ಚಿತ್ರದ ಮೂಲಕ ನನ್ನನ್ನು ಡಿಫರೆಂಟ್ ಆಗಿ ತೋರಿಸುತ್ತಾರೆಂಬ ನಂಬಿಕೆ ನನಗಿದೆ.
ನನಗೆ ರೊಮ್ಯಾಂಟಿಕ್ ಹೀರೋ ಆಗಿರೋದು ಹೆಚ್ಚು ಇಷ್ಟ. ಎಲ್ಲ ವರ್ಗದ ಜನರ ಮೆಚ್ಚುಗೆಗೂ ಪಾತ್ರವಾಗುವ ಬಯಕೆ ನನ್ನದು. ಎಲ್ಲ ಬಗೆಯ ಪಾತ್ರಗಳನ್ನು ಮಾಡುವ ಆಸೆ ನನಗಿದೆ. ಆದರೆ ರಿಯಲಿಸ್ಟಿಕ್ ಅಲ್ಲದ ಪಾತ್ರಗಳಲ್ಲಿ ಮಾತ್ರ ನಾನು ನಟಿಸೋದಿಲ್ಲ ಎನ್ನುತ್ತಾರೆ ಪುನೀತ್.