ಒಂದು ಚಿತ್ರಕ್ಕೆ ಗರಿಷ್ಟ ಎಷ್ಟು ನಿರ್ಮಾಪಕರಿರುತ್ತಾರೆ? ಎಂದರೆ ಸಾಮಾನ್ಯವ್ಯಾಗಿ ನಾಲ್ಕರಿಂದ ಐದು ಎನ್ನಬಹುದು. ಆದರೆ ಇಲ್ಲಿ ಹಾಗಲ್ಲ. ಚಿತ್ರವೊಂದಕ್ಕೆ ಬರೋಬ್ಬರಿ ನಲವತ್ತು ನಿರ್ಮಾಪಕರಿದ್ದಾರೆ. ಇದು ಹೇಗಪ್ಪ ಎಂದು ಆಶ್ಚರ್ಯಪಡಬೇಡಿ. ಇದನ್ನು ಸಾಧ್ಯವಾಗಿಸಿದ್ದು ಅಂತರಾತ್ಮ ಚಿತ್ರತಂಡ.
ಇಂಥ ಹೊಸ ಯೋಜನೆಗೆ ಮುನ್ನುಡಿ ಬರೆದಿದ್ದು ಪ್ರವೀಣ್ ಮತ್ತು ನವೀನ್. ಈ ಚಿತ್ರದಲ್ಲಿ ಪ್ರತಿಯೊಬ್ಬರು 2 ಲಕ್ಷ ಹಣ ಸುರಿದಿದ್ದಾರೆ. ಕೇಬಲ್ ಆಪರೇಟರ್‌ಗಳಿಂದ ಹಿಡಿದು ಅನಿವಾಸಿ ಟೆಕ್ಕಿಗಳೂ ನಿರ್ಮಾಣಕ್ಕೆ ಹಣ ಸುರಿದಿದ್ದಾರೆ. ಹೀಗೆ ಮಾಡುವುದಕ್ಕೂ ಕಾರಣವಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ಮಾಪಕರು ವಾರಕ್ಕೊಂದು ಚಿತ್ರ ತೆಗೆಯುತ್ತಿದ್ದಾರೆ. ಆದರೆ ಹಾಕಿದ ಹಣ ವಾಪಸ್ ಬರುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಪ್ರತಿಯೊಬ್ಬರಿಂದಲೂ ಎರಡು ಲಕ್ಷ ಹಾಕಿದರೆ, ಅಕಸ್ಮಾತ್ ನಷ್ಟವಾದರೂ ಅದನ್ನು ತಡೆದುಕೊಳ್ಳಬಹುದು ಎಂಬುದು ಅವರ ಅಂಬೋಣ.
ಇದರ ಜೊತೆಗೆ ನೂರು ರೂಪಾಯಿಯ ವೋಚರ್ ನೀಡುತ್ತಿದ್ದಾರೆ. ಇದನ್ನು ಕೊಂಡರೆ ಸಿಡಿ ಮತ್ತು ಐವತ್ತು ರೂಪಾಯಿಯ ಟಿಕೆಟ್ ದೊರೆಯುತ್ತದೆ. ಒಂದು ವೇಳೆ ಲಕ್ಕಿ ಡ್ರಾದಲ್ಲಿ ಬಹುಮಾನ ಬಂದರೆ ಇಪತ್ತೈದು ಲಕ್ಷದ ಚಿನ್ನ ದೊರೆಯುತ್ತದೆ. ಇದು ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದ ಯೋಜನೆ.
ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಈಗಾಗಲೇ ಬೆನ್ನುತಟ್ಟಿದೆಯಂತೆ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟೇ ಹಣ ಸುರಿಯಲಾಗಿದೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಹಾರರ್ ಚಿತ್ರ ಎನ್ನುತ್ತಿದೆ ಚಿತ್ರತಂಡ. ಚಿತ್ರ ನೋಡಬೇಕಾದರೆ ಇನ್ನು ಒಂದು ವಾರ ಕಾಯಬೇಕು. ಹೊಸಬರ ಚಿತ್ರಕ್ಕೆ ಪ್ರೇಕ್ಷಕ ಹೇಗೆ ಪ್ರತಿಕ್ರಿಯೆ ನೀಡುತ್ತಾನೋ ಕಾದು ನೋಡಬೇಕು.