ವಿದೇಶದಲ್ಲಿ ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರ ಅಪ್ಪು ಪಪ್ಪು. ಕಿರಿ ವಯಸ್ಸಿನ ಪುಟಾಣಿ ಏಜೆಂಟ್ ಸ್ನೇಹಿತ್ ಮತ್ತು ಚಿಂಪಾಂಜಿ ಇಲ್ಲಿ ಪ್ರಮುಖ ಪಾತ್ರಧಾರಿಗಳು. ಚಿತ್ರದ ಹೆಸರೇ ಹೇಳುವಂತೆ ಇದೊಂದು ಮಕ್ಕಳ ಚಿತ್ರ.
ಮಕ್ಕಳ ಚಿತ್ರ ಎಂದಾಕ್ಷಣ ಇದೊಂದು ಕಡಿಮೆ ಬಜೆಟ್ ಚಿತ್ರವೆಂಬುದು ಎಲ್ಲರ ಅಭಿಪ್ರಾಯ. ಆದರೆ ಅದಕ್ಕೆ ಈ ಚಿತ್ರ ಹೊರತಾಗಿದೆ. ಮನೆಮಂದಿ ಹಾಗೂ ಮಕ್ಕಳಿಗೆ ಇಷ್ಟವಾಗುವ ಎಲ್ಲಾ ಅಂಶಗಳನ್ನು ಇಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರಂತೆ ನಿರ್ದೇಶಕ ಅನಂತರಾಜು.
ಚಿತ್ರದಲ್ಲಿ ಅಪ್ಪು ಮತ್ತು ಪಪ್ಪು ಮುಖ್ಯ ಪಾತ್ರಧಾರಿಗಳಾಗಿದ್ದರೂ, ಇವರೊಂದಿಗೆ ನಟ ಕೋಮಲ್ಗೂ ಇದರಲ್ಲಿ ಪ್ರಮುಖ ಪಾತ್ರವಿದೆ. ಇವರೊಂದಿಗೆ ರಂಗಾಯಣ ರಘು, ಜೆನಿಫರ್ ಕೊತ್ವಾಲ್ ಮೊದಲಾದ ತಾರೆಯರು ತಾರಾಬಲ ಪ್ರದರ್ಶನ ಮಾಡಲಿದ್ದಾರೆ. ಚಿತ್ರದ ಮುಕ್ಕಾಲು ಭಾಗ ವಿಶ್ವದ ಹಲವು ಕಡೆಗಳಲ್ಲಿ ಮುಗಿಸಿ ಬಂದಿದೆ. ಚಿತ್ರಕ್ಕೆ ಮುಂಗಾರು ಮಳೆಯ ಕೃಷ್ಣ ಅವರ ಕ್ಯಾಮರಾ ಕೈಚಳಕವಿದೆ. ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಬಗ್ಗೆ ಅವರಿಗೆ ಹೆಮ್ಮೆಯಿದೆ. ಒಟ್ಟಿನಲ್ಲಿ ಇದು ಮೇಡ್ ಫಾರ್ ಮನರಂಜನೆ ಎಂಬುದು ಚಿತ್ರತಂಡದ ಅಭಿಪ್ರಾಯ.