ಪ್ರಚಂಡ ರಾವಣ ಚಿತ್ರದ ಬಳಿಕ ನಿರ್ದೇಶಕ ಶ್ರೀನಿವಾಸ್ ಪ್ರಸಾದ್ ಸದ್ದಿಲ್ಲದೆ ನಂಜನಗೂಡು ನಂಜುಂಡ ಚಿತ್ರ ಮುಗಿಸಿದ್ದಾರೆ. ಮಾನಸಿಕ ರೋಗಿಯೊಬ್ಬನ ಸುತ್ತ ಹಣೆಯಲಾಗಿರುವ ಈ ಚಿತ್ರಕ್ಕೆ ಮಳೆಯಾಳಂನ ಒಡಕ್ಕುನೋಕ್ಕಿ ಯಂದಿರಮ್ ಚಿತ್ರವೇ ಸ್ಪೂರ್ತಿಯಂತೆ.
ತನ್ನ ಹೆಂಡತಿ ಸುಂದರವಾಗಿರುವುದನ್ನೇ ಅನುಮಾನಿಸುವ ನಾಯಕನ ಎಡವಟ್ಟುಗಳು ಇಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ. ಪತ್ನಿಯನ್ನು ಯಾರಾದರೂ ನೋಡಿದರೆ, ಮಾತನಾಡಿಸಿದರೆ ಅನುಮಾನ ಪಡುವ ನಾಯಕ ಅತಿರೇಕಕ್ಕೆ ಹೋಗಿ ನೋಡುಗರಿಗೆ ಹೇಗೆ ಹಾಸ್ಯ ಒದಗಿಸುತ್ತಾನೆ ಎನ್ನುವುದೇ ಚಿತ್ರದ ಮುಖ್ಯ ಕಥಾವಸ್ತು.
ಚಿತ್ರದಲ್ಲಿ ನಾಯಕನಾಗಿ ರವಿಶಂಕರ್ ನಟಿಸುತ್ತಿದ್ದರೆ, ನಾಯಕಿಯಾಗಿ ಮಲೆಯಾಳಂ ನಟಿ ಹಂಸಿನಿ ನಟಿಸಿದ್ದಾರೆ. ಈ ಹಿಂದೆ ರವಿಶಂಕರ್ ಪಯಣ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಚಿತ್ರದ ಸಂಕಲನ ಕಾರ್ಯ ಭರದಿಂದ ನಡೆಯುತ್ತಿದ್ದು, ಶೀಘ್ರದಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ.