ಡವ್..! ಇದು ಕನ್ನಡದ ಯುವಜನತೆ ಇಟ್ಟ ಹೆಸರು. ಹಲವರು ಇದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡು ಬಳಸುತ್ತಿದ್ದಾರೆ. ಆದರೆ ಇದೀಗ ಅದೇ ಹೆಸರನ್ನು ಜೋಗಿ ಖ್ಯಾತಿಯ ಪ್ರೇಮ್ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಹೌದು, ಪ್ರೇಮ್ ತಮ್ಮ ಮತ್ತೊಂದು ಚಿತ್ರಕ್ಕೀಗ ಡವ್ ಎಂದು ನಾಮಕರಣ ಮಾಡಿದ್ದಾರೆ. ಏನಪ್ಪಾ, ಜೋಗಯ್ಯ ಮಾಡಲು ಹೊರಟಿರುವ ಪ್ರೇಮ್ ಇದ್ದಕ್ಕಿದ್ದಂತೆಯೇ ಡವ್ ಹೊಡೀತಿದ್ದಾರಲ್ಲ ಎಂದು ಆಶ್ಚರ್ಯಪಡಬೇಡಿ. ಜೋಗಯ್ಯ ಈಗಾಗಲೇ ನಿರ್ಣಯವಾದಂತೆಯೇ ನಿಶ್ಚಿತ ದಿನಾಂಕದಂದು ಸೆಟ್ಟೇರಲಿದೆ. ಆದರೆ ಅದಕ್ಕೂ ಮೊದಲು ಒಂದು ಕೈ ನೋಡೇ ಬಿಡುವ ಎಂದು ಡವ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಅವರೇ ನಾಯಕ ನಟ. 'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದಲ್ಲಿ ಹೀರೋ ಆಗಿ ಸೋತಿದ್ದ ಅವರಿಗೆ ಡವ್ ಒಂದು ಅಗ್ನಿಪರೀಕ್ಷೆಯೇ ಸರಿ.
ಇನ್ನೊಂದು ಮೂಲಗಳ ಪ್ರಕಾರ, ಪ್ರೇಮ್ ಅವರ ಬಲಗೈ ಬಂಟ ದಶಾವತಾರ ಚಂದ್ರು ಈ ಚಿತ್ರವನ್ನು ನಿರ್ಮಿಸುತ್ತಿದ್ದರಂತೆ. ರಾಜ್ ದಿ ಶೋಮ್ಯಾನ್ ಚಿತ್ರದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ನಾಯಕಿಯ ಹುಡುಕಾಟದಲ್ಲಿದ್ದಾರೆ ಪ್ರೇಮ್. ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.