ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪ್ತರಕ್ಷಕದ ತಮಿಳು ಹಾಗೂ ತೆಲುಗು ರಿಮೇಕ್‌ಗೆ ಭಾರೀ ಬೇಡಿಕೆ! (Aaptha Rakshaka Remake | Tamil | Telugu | P.Vasu | Dr. Vishnuvardhan | Rajnikanth)
ಆಪ್ತರಕ್ಷಕದ ತಮಿಳು ಹಾಗೂ ತೆಲುಗು ರಿಮೇಕ್‌ಗೆ ಭಾರೀ ಬೇಡಿಕೆ!
NRB
ದಿ.ಡಾ| ವಿಷ್ಣುವರ್ಧನ್ ಅವರ 200ನೇ ಹಾಗೂ ಕೊನೆಯ ಚಿತ್ರ ಆಪ್ತರಕ್ಷಕ ಭರ್ಜರಿಯಾಗಿ ಹಿಟ್ ಆಗಿದ್ದು, ಇದೀಗ ತೆಲುಗು ಹಾಗೂ ತಮಿಳು ಚಿತ್ರರಂಗದಿಂದಲೂ ಚಿತ್ರದ ಹಕ್ಕಿಗಾಗಿ ಬೇಡಿಕೆ ಕುದುರಿಸಿಕೊಂಡಿದೆ.
ಹೌದು. ಪಿ.ವಾಸು ನಿರ್ದೇಶನದ ಆಪ್ತರಕ್ಷಕ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆಯೀಗ ಚೆನ್ನೈ ಹಾಗೂ ಹೈದರಾಬಾದ್ ಚಿತ್ರೋದ್ಯಮಗಳಲ್ಲೂ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಆಪ್ತರಕ್ಷಕದ ತಮಿಳು ರಿಮೇಕನ್ನು ರಜನೀಕಾಂತ್ ಜೊತೆಗೆ ಮಾಡುವ ಬಗ್ಗೆಯೂ ಮಾತುಗಲು ಕೇಳಿ ಬರುತ್ತಿದೆ. ತಮಿಳು ಹಾಗೂ ತೆಲುಗಿನಲ್ಲಿ ಆಪ್ತರಕ್ಷಕಕ್ಕೆ ರಜನೀಕಾಂತ್ ಅವರು ಆಯ್ಕೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ, ರಜನಿ ಇದ್ಕಕೆ ಒಪ್ಪದಿದ್ದರೆ, ತಮಿಳು ಹಾಗೂ ತೆಲುಗಿನಲ್ಲಿ ಬೇರೆ ಬೇರೆ ಪ್ರಖ್ಯಾತ ನಟರನ್ನು ಹಾಕಿಕೊಂಡು ಆಪ್ತರಕ್ಷಕ ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ತೆಲುಗು ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ ನಿರ್ಮಾಪಕ ಬೆಳ್ಳಂಕೊಂಡ ಸುರೇಶ್ ಈಗಾಗಲೇ ಆಪ್ತರಕ್ಷಕ ಚಿತ್ರದ ರಿಮೇಕ್ ಹಕ್ಕು ಪಡೆಯಲು ಭಾರೀ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಅವರು ಈಗಾಗಲೇ ನಿರ್ದೇಶಕ ವಾಸು ಅವರಿಗೂ ಭಾರೀ ಮುಂಗಡ ಹಣವನ್ನೇ ನೀಡಿದ್ದಾರೆ ಎಂಬ ಮಾತೂ ಇದೆ.
ಮೂಲಗಳ ಪ್ರಕಾರ ರಜನೀಕಾಂತ್ ಅವರನ್ನು ಈ ಚಿತ್ರದಲ್ಲಿ ನಟಿಸಲು ಮನವೊಲಿಸುವ ಭಾರೀ ಯತ್ನ ನಡೆಯುತ್ತಿದೆ. ಆಪ್ತರಕ್ಷಕ ಚಿತ್ರವನ್ನು ರಜನೀಕಾಂತ್ ಬಹುವಾಗಿ ಮೆಚ್ಚಿದ್ದರೂ, ಸದ್ಯಕ್ಕೆ ರಜನಿ ತಮ್ಮ ಎಂದಿರನ್ ಚಿತ್ರದ ಬ್ಯುಸಿಯಲ್ಲಿ ಮುಳುಗಿದ್ದಾರೆ. ಹೀಗಾಗಿ ಅವರಿನ್ನೂ ಆಪ್ತರಕ್ಷಕ ಚಿತ್ರದ ತಮಿಳು ರಿಮೇಕ್ ಚಿತ್ರದಲ್ಲಿ ನಟಿಸಲು ಅಧಿಕೃತ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.