ಮಾಸ್ಟರ್ ಆನಂದ್ ಈಗ ಗೃಹಸ್ಥಾಶ್ರಮ ಪ್ರವೇಶಿಸುತ್ತಿದ್ದಾರೆ! ತೀರಾ ಇತ್ತೀಚೆನವರೆಗೂ ಬಾಲನಟನಂತೇ ನಮ್ಮ ಮುಂದೆ ನಿಂತಿದ್ದ ಮಾಸ್ಟರ್ ಆನಂದ್ ಈಗ ಮದುಮಗನೂ ಆಗಿಬಿಟ್ಟಿದ್ದಾರೆ. ಹೌದು, ಇದೇ 18ರಂದು ಮಾಸ್ಟರ್ ಆನಂದ್ ನಂಜನಗೂಡಿನ ಯಶಸ್ವಿನಿಯವರ ಕೈ ಹಿಡಿಯಲಿದ್ದಾರೆ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಆನಂದ್ ಅನೇಕ ಚಿತ್ರಗಳಲ್ಲಿ ತುಂಟ, ಪೋಕರಿ ಹುಡುಗನಾಗಿ ಎಲ್ಲರನ್ನೂ ನಗಿಸಿದವರು. ಒಂದು ಹಂತದಲ್ಲಿ ಅತಿ ಹೆಚ್ಚು ಬೇಡಿಕೆಯ ಬಾಲನಟನಾಗಿ ಗುರುತಿಸಿಕೊಂಡಿದ್ದ ಆನಂದ್, ಮಾಸ್ಟರ್ ಹಂತ ದಾಟಿ ಈಗ ಮಿಸ್ಟರ್ ಆಗಿದ್ದಾರೆ. ಆದರೂ ಮಾಸ್ಟರ್ ಎಂದೇ ಇಂದಿಗೂ ಚಿರಪರಿಚಿತ.
ಆನಂದ್ ನಟಿಸಿ ನಿರ್ದೇಶಿಸಿದ್ದ ಎಸ್ಸೆಸ್ಸೆಲ್ಸಿ ನನ್ಮಕ್ಳು ಹಾಸ್ಯ ಧಾರಾವಾಹಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಚಿತ್ರಗಳಲ್ಲೂ ಹಾಸ್ಯ ನಟನಾಗಿ ಆನಂದ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಸಿನಿಮಾ ರಂಗದ ಹುಡುಗಿ ಬೇಡ ಎಂಬ ಕಾರಣಕ್ಕೆ ಪೋಷಕರು ಒಪ್ಪಿದ ಯಶಸ್ವಿನಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ಮಾಸ್ಟರ್. ಅಂದ ಹಾಗೆ ಯಶಸ್ವಿನಿ ನಂಜನಗೂಡಿನ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ. ಮಾ.21ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ.