ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 98ನೇ ಚಿತ್ರವೆಂದು ಹೇಳಲಾಗುತ್ತಿರುವ ಮೈಲಾರಿ ಚಿತ್ರದ ಫೋಟೋಶೂಟ್ ಆರಂಭವಾಗಿದೆ. ತಾಜ್ಮಹಲ್ ಚಿತ್ರದ ಖ್ಯಾತಿಯ ಚಂದ್ರು ಮೈಲಾರಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈಗಾಗಲೇ ಈ ಚಿತ್ರಕ್ಕೆ ಮಾಡಬೇಕಾದ ಕೆಲಸಗಳು ಪ್ರಾರಂಭಗೊಂಡಿದೆ. ವಿಶೇಷವೆಂದರೆ ಮೈಲಾರಿ ಚಿತ್ರದ ಫೋಟೋಶೂಟ್ ಶಿವಣ್ಣ ಅವರ ಸ್ವಗೃಹದಲ್ಲಿಯೇ ಮಾಡಲಾಗುತ್ತಿದೆ!
ಅದಕ್ಕಾಗಿಯೇ ಇದೀಗ ಅವರ ಮನೆ ಮುಂದೆ ವಿಶಿಷ್ಟವಾದ ಸೆಟ್ ಒಂದನ್ನು ನಿರ್ಮಿಸಲಾಗಿದೆ. ಈ ಮೊದಲು ಇವರ ಮನೆಯಂಗಳದಲ್ಲಿ ಚೆಲುವೆಯೇ ನಿನ್ನ ನೋಡಲು ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಇಲ್ಲಿ ಚಿತ್ರೀಕರಣವಾಗುತ್ತಿದೆ.
ಶಿವರಾಜ್ ಕುಮಾರ್ ದಿನಾಂಕ ನೀಡಿದ್ದರಿಂದ ತಮ್ಮ ಮಳೆ ಚಿತ್ರವನ್ನು ಮುಂದೆ ಹಾಕಿದ್ದಾರೆ ಚಂದ್ರು. ಚಿತ್ರದ ಮುಹೂರ್ತ ಮುಂದಿನ ತಿಂಗಳು ಏಪ್ರಿಲ್ ಒಂದು. ಈ ದಿನಕ್ಕೆ ಬೇರೆಯದೇ ಮಹತ್ವವಿದ್ದರೂ, ಪಂಚಾಂಗದ ಪ್ರಕಾರ ಇದು ಒಳ್ಳೆಯ ದಿನವಂತೆ. ಅಂದ ಹಾಗೆ, ಶೀಘ್ರದಲ್ಲಿ ಚಿತ್ರದ ನಾಯಕಿ ಯಾರೆಂಬುದನ್ನು ಚಂದ್ರು ಅವರು ಪ್ರಕಟಿಸಲಿದ್ದಾರಂತೆ.