ಆಪ್ತರಕ್ಷಕ ಚಿತ್ರ ತಮಿಳಿಗೆ ಚಂದ್ರಮುಖಿ- 2 ಆಗಿ ರಿಮೇಕ್ ಆಗುವುದಂತೂ ಖಂಡಿತ. ತೆಲುಗಿಗೂ ರಿಮೇಕ್ ಮಾಡುವ ಸೂಚನೆಯನ್ನು ಈ ಹಿಂದೆ ನಿರ್ದೇಶಕ ಪಿ.ವಾಸು ನೀಡಿದ್ದರು. ಅದಕ್ಕೆ ಪೂರಕವೆಂಬಂತೆ, ತಮಿಳು, ತೆಲುಗಿಗೆ ರಿಮೇಕ್ ಹಕ್ಕನ್ನು ಈಗಾಗಲೇ ತೆಲುಗು ನಿರ್ಮಾಪಕರೊಬ್ಬರು ಖರೀದಿಸಿದ್ದಾರೆಂಬ ಸುದ್ದಿಯೂ ಇದೆ. ಈ ಸುದ್ದಿಗಳ ಬೆನ್ನಲ್ಲೇ ಬಂದ ಸುದ್ದಿಯೆಂದರೆ ತೆಲುಗಿನ ಆಪ್ತರಕ್ಷಕ ಅವತರಣಿಕೆಗೆ ಚಿರಂಜೀವಿ ನಾಯಕರಾಗಿ ನಟಿಸುವ ಸಾಧ್ಯತೆಯಿದೆ!
ಮೆಗಾ ಸ್ಟಾರ್ ಖ್ಯಾತಿಯ ಚಿರಂಜೀವಿ ಅವರು ಈಗಾಗಲೇ ರಾಜಕೀಯದಲ್ಲಿ ಬ್ಯುಸಿ. ಹಾಗಾಗಿ ಚಿತ್ರಗಳಲ್ಲಿ ನಟಿಸುವ ಬಗ್ಗೆ ಅಂತಹ ಸುದ್ದಿಯೇನನ್ನೂ ಅವರು ಮಾಡುತ್ತಿಲ್ಲ. ಆದರೂ, ಆಪ್ತರಕ್ಷಕ ಚಿತ್ರದ ಬಗ್ಗೆ ಮಾತಾಡುವಾಗ ಮಾತ್ರ ಚಿರಂಜೀವಿ ಹೆಸರು ಕೇಳಿಬರುತ್ತಿದೆ. ಉತ್ತಮವಾದ ಸೂಕ್ತ ಚಿತ್ರಗಳು ಸಿಕ್ಕಿದಲ್ಲಿ ಚಿರಂಜೀವಿ ನಟಿಸಲು ಸಿದ್ಧರಾಗಿರುವುದರಿಂದ ಈ ಚಿತ್ರಕ್ಕೆ ಚಿರಂಜೀವಿ ನಟಿಸಬಹುದಾದ ಸಾಧ್ಯತೆಗಳಿವೆ ಎಂಬುದು ಚಿತ್ರರಂಗದ ಮಾತು.
ಈ ಹಿಂದೆ ಪಿ. ವಾಸು ಅವರು ಕನ್ನಡದಲ್ಲಿ ಆಫ್ತಮಿತ್ರ ಮಾಡಿದ ನಂತರ ತಮಿಳು ಹಾಗೂ ತೆಲುಗಿನಲ್ಲಿ ಚಂದ್ರಮುಖಿ ಮಾಡಿದ್ದರು. ಆದರೆ ತಮಿಳಿನಲ್ಲಿ ಭರ್ಜರಿ ಗೆಲುವು ಸಿಕ್ಕರೂ ತೆಲುಗಿನಲ್ಲಿ ಸಪ್ಪೆಯಾಗಿ ಹೋಯಿತು. ಈ ಬಾರಿಯೂ ತಮಿಳು ಹಾಗೂ ತೆಲುಗಿಗೆ ಒಂದೇ ತಾರಗಣವೇ ಆಯ್ಕೆಾಗುವ ಸಂಭವವೂ ಇದೆ. ರಜನೀಕಾಂತ್ ಒಪ್ಪಿದರೆ ತಮಿಳು ಹಾಗೂ ತೆಲುಗಿಗೆ ಎರಡಕ್ಕೂ ಹೀರೋ ಆಗಿ ಮಾಡುವ ಸಾಧ್ಯತೆಯನ್ನು ವಾಸು ಹೇಳಿದ್ದರು. ಆದರೆ, ರಜನಿ ಒಪ್ಪದಿದ್ದರೆ, ತೆಲುಗಿನ ಬೇರೆ ಸೂಪರ್ ಸ್ಟಾರ್ ಅವರನ್ನು ಸಂಪರ್ಕಿಸಬೇಕಾಗುತ್ತದೆ ಎಂಬ ಮಾತಾಡಿದ್ದರು. ಆದರೆ ರಜನಿ ಅವರು ಆಪ್ತರಕ್ಷಕ ನೋಡಿ ಇಂಪ್ರೆಸ್ ಆಗುವ ಜೊತೆ ಕಣ್ಣೀರಾದ ಕಥೆ ಗೊತ್ತಿದ್ದರೂ, ರಜನಿ ಇನ್ನೂ ತಮ್ಮ ಒಪ್ಪಿಗೆಯನ್ನು ನೀಡಿಲ್ಲವಾದ್ದರಿಂದ ಇವೆಲ್ಲವೂ ಅಂತೆಕಂತೆಗಳ ರೂಪದಲ್ಲಿಯೇ ಇದೆ!