ಕನ್ನಡ ಚಿತ್ರರಂಗದ ಸ್ವಮೇಕ್ ನಿರ್ದೇಶಕ, ಮೇಷ್ಟು ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ನೂರು ಜನ್ಮಕೂ ಚಿತ್ರವು ಬಿಡುಗಡೆಗೆ ಸಿದ್ದಗೊಂಡಿದೆ.
ಚಿತ್ರದ ಚಿತ್ರೀಕರಣದ ಶೇ.40ರಷ್ಟು ಭಾಗ ವಿದೇಶಗಳಲ್ಲಿ ನಡೆದಿರುವುದು ವಿಶೇಷ. ಹಾಂಕಾಂಗ್‌ನ ಸ್ಟಾರ್ ಕ್ರೂಸ್ ಹಡಗಿನಲ್ಲಿ ಹಾಗೂ ಸುಂದರತಾಣಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆದಿದೆ. ಕಲಾ ನಿರ್ದೇಶಕ ಶಶಿಧರ್ ಅಡಪರವರು ಬಳಸಿರುವ ಸೆಟ್‌ಗಳು ಕೂಡಾ ಬಿಡುಗಡೆಗೆ ಮುಂಚೆಯೇ ಭಾರೀ ಕುತೂಹಲಕ್ಕೆ ಗ್ರಾಸವಾಗಿದೆ. ಚಿತ್ರಕ್ಕೆ ಮನೋಮೂರ್ತಿಯವರು ಸಂಗೀತ ಸಂಯೋಜನೆಯನ್ನು ಮಾಡಿದ್ದು, ಚಿತ್ರದ ಹಾಡುಗಳು ಚೈತ್ರ, ಎಂ.ಡಿ.ಪಲ್ಲವಿ, ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಅವರುಗಳ ಕಂಠ ಸಿರಿಯಲಿ ಮೂಡಿಬಂದಿದೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆರವರ ಛಾಯಾಗ್ರಹಣವಿದ್ದು, ಬಸವರಾಜು ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿ ಐಂದ್ರಿತಾ ರೇಗೆ ನಾಯಕ ನಟನಾಗಿ ಸಂತೋಷ್ ಅಭಿನಯಿಸಿದ್ದಾರೆ. ಚಿತ್ರದ ಶೂಟಿಂಗ್ ಸಮಯದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಐಂದ್ರಿತಾರ ಕೆನ್ನೆಗೆ ಬಾರಿಸಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ತಾನು ಕಪಾಳಕ್ಕೆ ಬಾರಿಸಿದ್ದನ್ನು ನಾಗತಿಹಳ್ಳಿ ಅವರೂ ಒಪ್ಪಿಕೊಂಡಿದ್ದರು. ಈ ಪ್ರಕರಣ ಮೇಷ್ಟ್ರು ಖ್ಯಾತಿಯ ನಾಗತಿಹಳ್ಳಿ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಆದರೂ, ಆ ಮೂಲಕ ನೂರು ಜನ್ಮಕೂ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು ಅಂದರೂ ತಪ್ಪಿಲ್ಲ ಬಿಡಿ.
ಅದೇನೇ ಇರಲಿ, ಸದ್ಯ್ಕಕೆ ಚಿತ್ರವಂತೂ ಪೂರ್ಣ ಕೆಲಸ ಮುಗಿಸಿದೆ. ಬರುವ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಾಗತಿಹಳ್ಳಿ ಅವರ ಒಲವೇ ಜೀವನ ಲೆಕ್ಕಾಚಾರ ಚಿತ್ರದ ನಂತರ ಬಿಡುಗಡೆ ಕಾಣುವ ಚಿತ್ರ ಇದಾಗಿದ್ದು, ಅಲ್ಲಿ ದಕ್ಕದ ಯಶಸ್ಸು ಈ ಮೂಲಕ ದಕ್ಕುತ್ತಾ ಅಂತ ಕಾದು ನೋಡಬೇಕು.