'ಅಂತ' ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆ ಚಿತ್ರದ ಕನ್ವರ್‌ಲಾಲ್ ಬೋಲೋ.. ಎಂಬ ಡೈಲಾಗುಗಳು ಪ್ರತಿಯೊಬ್ಬರ ಬಾಯಲ್ಲೂ ನಲಿದಾಡಿತ್ತು. ಆದರೀಗ ಮತ್ತೆ ಕನ್ವರ್‌ಲಾಲ್ ಹೇಳುವ ಕಾಲ ಬಂದಿದೆ. ವಿಶೇಷವೆಂದರೆ ಈ ಬಾರಿಗೆ ಕನ್ವರ್‌ಲಾಲ್ ಮಂಡ್ಯದ ಗಂಡು ಅಂಬಿಗೆ ಜೊತೆಯಾಗಿದ್ದಾರೆ ನಮ್ಮ ಕಿಚ್ಚ ಸುದೀಪ್!
MOKSHA
ಹೌದು. ಕಿಚ್ಚ ಸುದೀಪ್ ಹಳೆಯ ಕನ್ನಡ ಚಿತ್ರ ಅಂತವನ್ನು ರಿಮೇಕಿಸಿ ಮತ್ತೆ ತೆರೆಗೆ ತರಲಿದ್ದಾರೆ. ಈಗಾಗಲೇ ಈ ಬಗ್ಗೆ ಸುದೀಪ್ ಚಿತ್ರದ ಹಕ್ಕುಗಳನ್ನೂ ಪಡೆದಿದ್ದಾರೆ. ಆದರೆ ಚಿತ್ರಕ್ಕೆ ಕನ್ವರ್‌ಲಾಲ್ ಎಂದು ಹೆಸರಿಟ್ಟಿದ್ದು, ಇದರಲ್ಲಿ ಅಂಬರೀಶ್ ಹಾಗೂ ಸುದೀಪ್ ಜೊತೆಯಾಗಿ ನಟಿಸಲಿದ್ದಾರೆ. ನಾಯಕಿಯಾಗಿ, ಬೆಂಗಳೂರಿನ ಹುಡುಗಿ, ಈಗಾಗಲೇ ಪವರ್ ಸ್ಟಾರ್ ಪುನೀತ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಸುದೀಪ್ ಹೊತ್ತಿದ್ದಾರೆ.
WD
ರಾಮ್ ಚಿತ್ರದಲ್ಲಿ ಹೊಸ ಗಾನ ಬಜಾನಾ ಎಂದು ಥಕ ಥಕ ಕುಣಿದ ಬಳಿಕ ಪ್ರಿಯಾಮಣಿ ಏನೋ ಒಂಥರಾ ಮೂಲಕ ಗಣೇಶ್ ಜೊತೆ ನಟಿಸಿದ್ದಾರೆ. ಆದರೆ ಏನೋ ಒಂಥರಾ ಇನ್ನೂ ಬಿಡುಗಡೆಯಾಗಿಲ್ಲ. ಹಾಗಾಗಿ ಕನ್ವರ್‌ಲಾಲ್ ಚಿತ್ರ ಪ್ರಿಯಾಮಣಿ ಅಭಿನಯದ ಮೂರನೇ ಕನ್ನಡ ಚಿತ್ರವಾಗಲಿದೆ. ಮೂಲ ಚಿತ್ರದಲ್ಲಿ (ಅಂತ) ಲಕ್ಷ್ಮಿ ಪಾತ್ರದಲ್ಲಿ ಇದೀಗ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ರೌಡಿ ಗ್ಯಾಂಗಿನಲ್ಲಿ ನಾಯಕನಿಗೆ ಸಹಾಯ ಮಾಡುವ ರಜನಿ ಮಾತ್ರದಲ್ಲಿ ಸಜನಿ ಶರ್ಮಿಳಾ ಮಾಂಡ್ರೆ ನಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಸುಮನ್, ಶರತ್ ಲೋಹಿತಾಶ್ವ, ರಂಗಾಯಣ ರಘು, ಧರ್ಮ, ಅವಿನಾಶ್ ಮೊದಲಾದವರು ನಟಿಸುತ್ತಿದ್ದಾರೆ. ಅಂದಹಾಗೆ ಚಿತ್ರಕ್ಕೆ ಇದೇ 18ರಂದು ಮುಹೂರ್ತ. ಅದೂ ಪರಪ್ಪನ ಅಗ್ರಹಾರದಲ್ಲಿ!