ಪ್ರತಿವಾರ ಎರಡು ಮೂರು ಚಿತ್ರಗಳ ನಡುವೆ ಪೈಪೊಟಿ ನಡೆಯೋದು ಸಾಮಾನ್ಯ. ಆದರೆ ಈ ಬಾರಿ ಅದರಲ್ಲಿ ವಿಶೇಷವಿದೆ. ಒಬ್ಬರೇ ನಾಯಕ ನಟನಾಗಿ ನಟಿಸಿದ ಎರಡು ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಅದು ಶ್ರೀಹರಿಕಥೆ ಹಾಗೂ ಸಿಹಿಗಾಳಿ.
ಮನುಷ್ಯನ ಜೀವನವನ್ನು ಕೇಂದ್ರವನ್ನಾಗಿಸಿ ಅದನ್ನು ಭಾವನಾತ್ಮಕವಾಗಿ ಚಿತ್ರಿಸಿ ಇಂದಿನ ಪ್ರೇಕ್ಷಕರು ಏನೇನು ಬಯಸುತ್ತಾರೊ ಅದೆಲ್ಲವನ್ನೂ ಒಳಗೊಂಡ ಒಂದು ಟೋಟಲ್ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಸಿಹಿಗಾಳಿ. ಇನ್ನೊಂದು ಚಿತ್ರ ದಯಾಳ್ ನಿರ್ದೇಶನದ ಶ್ರೀ ಹರಿಕಥೆ. ಇವರೆಡು ಈ ವಾರ ಬಿಡುಗಡೆಗೆ ಸಿದ್ಧವಾಗಿದೆ.
ತಾಯಿ ಮತ್ತು ಮಗನ ನಡುವಿನ ಪ್ರೀತಿಯನ್ನು ಬಿಂಬಿಸುವುದರ ಜೊತೆಯಲ್ಲೆ ನಾಯಕ, ನಾಯಕಿಯ ಪ್ರೀತಿಯನ್ನು ಸುಂದರವಾಗಿ ಚಿತ್ರಿಸಲಾಗಿದೆ ಎಂದು ಸಿಹಿಗಾಳಿ ಚಿತ್ರದ ನಿರ್ದೇಶಕರ ಅಭಿಪ್ರಾಯ. ಹಾಗೆ ಚಿತ್ರದಲ್ಲಿ ಮಾತಿಗಿಂತ ಮೌನವೇ ಹೆಚ್ಚಾಗಿದ್ದು, ದೃಶ್ಯಗಳೇ ಚಿತ್ರದ ಜೀವಾಳವಾಗಿದೆ ಎಂದೂ ಅವರು ವಿವರಿಸುತ್ತಾರೆ.
ಚಿತ್ರದ ಬಹುಪಾಲು ಚಿತ್ರೀಕರಣ ಮಂಗಳೂರು ಸುತ್ತಮುತ್ತ ನಡೆದಿದೆ. ಚಿತ್ರಕ್ಕೆ ಜಿ.ಆರ್.ಶಂಕರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್, ಹೇಮಂತ್ ದಾಸ್ ಬರೆದಿದ್ದಾರೆ.
ಈ ಹಿಂದಿನ ಅವರ ಎಲ್ಲಾ ಚಿತ್ರಗಳಿಗಿಂತ ಇಲ್ಲಿ ತುಂಬಾ ಭಿನ್ನವಾದ ಪಾತ್ರವಿದೆಯಂತೆ. ತಾಯಿ ಸೆಂಟಿಮೆಂಟ್ ಹಾಗೂ ಲವ್ ಈ ಚಿತ್ರದಲ್ಲಿ ತುಂಬಾ ವರ್ಕೌಟ್ ಆಗಿದೆ ಎನುತ್ತಾರೆ ಮುರಳಿ ಹಾಗೂ ನಿರ್ದೇಶಕ ಲೇಖನ್ ತುಂಬಾ ಕ್ರಿಯಾಶೀಲರು ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ, ಬಹು ಸುದ್ದಿ ಮಾಡಿದ ಶ್ರೀ ಹರಿಕಥೆ ಕೂಡಾ ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಸಿಹಿಗಾಳಿ ನಿಜಕ್ಕೂ ಸಿಹಿಗಾಳಿ ಸೇವಿಸುತ್ತೋ ಗೊತ್ತಿಲ್ಲ. ಒಟ್ಟಾರೆ ಅಡಕತ್ತರಿಯಲ್ಲಿ ಸಿಕ್ಕಿದ್ದು ಶ್ರೀ ಮುರಳಿ ಅಂತೂ ನಿಜ.