ಕನ್ನಡದ ಯಶಸ್ವಿ ಹಿರಿಯ ನಟ ದಿವಂಗತ ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಕಲ್ಯಾಣ್ ಎಕ್ಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಮೈಸೂರಿನಲ್ಲಿ ಜನಿಸಿದ ಭರತ್ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಮದ್ರಾಸಿನಲ್ಲಿ. ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಇವರ ಶೃಂಗಾರಂ ಚಿತ್ರವು ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಲಾವಿದನಾದವರು ಎಂದಿಗೂ ನಗುತ್ತಿರಬೇಕು ಎನ್ನುವ ಅಂಶವನ್ನು ನನ್ನ ತಂದೆಯಿಂದ ಕಲಿತಿರುವುದಾಗಿ ಹೇಳುವ ಭರತ್, ತಮಿಳಿನ ಕಸ್ತೂರಿ ಎಂಬ ಧಾರಾವಹಿಯಲ್ಲಿ ನಟಿಸುತ್ತಿದ್ದು ಕಿರುತೆರೆಯ ಬೇಡಿಕೆ ಕಲಾವಿದನಾಗಿದ್ದಾರೆ.
ಕನ್ನಡದಲ್ಲಿ ಬಾಲನಟನಾಗಿ ಮನೆ ಮಡದಿ ಮಕ್ಕಳು ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಯಾವುದೇ ಸಿನಿಮಗಳಲ್ಲಿ ಅವಕಾಶ ಸಿಗಲಿಲ್ಲ. ಈಗ ನಾಗನಾಥ ಜೋಶಿ ನಿರ್ದೇಶಿಸುತ್ತಿರುವ ಎಕ್ಕ ಚಿತ್ರದ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಕಾಯುತ್ತಿದ್ದಾರೆ.