ರೆಬಲ್ ಸ್ಟಾರ್ ಅಂಬರೀಷ್, ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ ವೀರ ಪರಂಪರೆ ಚಿತ್ರದ ಮೂಹೂರ್ತ ಅವರ ನಿವಾಸದಲ್ಲಿ ನೆರೆವೇರಿತು. ಎಸ್.ನಾರಾಯಣ್ ಈ ಚಿತ್ರಕ್ಕಾಗಿ ವಿಶೇಷ ಮುತುವರ್ಜಿ ವಹಿಸಿ ಕಥೆಯನ್ನು ತಯಾರಿಸಿದ್ದಾರಂತೆ. ಕಥೆಯ ಸಾರಂಶ ಅಂಬಿ ಹಾಗೂ ಸುದೀಪ್ ಅವರಿಗೂ ಇಷ್ಟವಾಗಿದ್ದು, ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆಂದು ಎಸ್.ನಾರಾಯಣ್ ತಿಳಿಸಿದ್ದಾರೆ.
ಚಿತ್ರವನ್ನು ನಿರ್ದೇಶಿಸುತ್ತಿರುವ ಎಸ್.ನಾರಾಯಣ್ ಮಹಿಳೆಯರ ದಿನದಂದೇ ಚಿತ್ರದ ಮೂಹೂರ್ತವನ್ನು ಮಹಿಳಾ ಮಣಿಗಳಿಂದಲೇ ನೆರವೇರಿಸಿರುವುದು ವಿಶೇಷ. ಮಹಿಳಾ ದಿನಾಚರಣೆಯಂದೇ ಚಿತ್ರವು ಸೆಟ್ಟೇರಿದ ನಿಮಿತ್ತ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಕ್ಯಾಮರಾಕ್ಕೆ ಚಾಲನೆ ಮಾಡಿದರು. ಎಸ್.ನಾರಾಯಣ್ ಅವರ ಪುತ್ರಿ ಬಿ.ಎನ್.ವಿದ್ಯಾಶ್ರೀ ಆರಂಭ ಫಲಕ ತೋರಿಸಿದರು. ನಾಣಿಯೇ ಸ್ವತಃ ಸಾಹಿತ್ಯ, ಸಂಗೀತವನ್ನು ನೀಡಿದ್ದು 6 ಗೀತೆಗಳಲ್ಲಿ ಈಗಾಗಲೇ 5ರ ಧ್ವನಿಮುದ್ರಣ ಮುಗಿಸಿದ್ದಾರೆ.
ನಾರಾಯಣ್ರವರ ಹಲವು ಯಶಸ್ವಿ ಚಿತ್ರಗಳಾದ ಗುಲಾಬಿ, ವೀರಪನಾಯಕ ಮತ್ತಿತರ ಚಿತ್ರಗಳಲ್ಲಿ ಛಾಯಗ್ರಹಣ ಮಾಡಿರುವ ಆರ್. ಗಿರಿ ಬಹಳ ವರ್ಷಗಳ ನಂತರ ಈಗ ಮತ್ತೆ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿನ ಉಳಿದ ಕಲಾವಿದರ ಪಟ್ಟಿಯನ್ನು ಸದ್ಯದಲ್ಲೆ ನೀಡಲಿದ್ದಾರೆ.