ನಟ ದರ್ಶನ್ ಹಾಗೂ ಸುದೀಪ್ ಅವರ ಕಾಲ್ ಶೀಟ್ ಪಡೆದು ಹೊಸ ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿರುವ ಸಾಯಿಪ್ರಕಾಶ್ ಚಿತ್ರಕ್ಕೆ ವಿಜಯ್ ಕುಮಾರ್, ಪ್ರಕಾಶ್ ಸೇರಿದಂತೆ ಮೂರು ಮಂದಿ ನಿರ್ಮಾಪಕರು ಸಾಥ್ ನೀಡುತ್ತಿದ್ದಾರೆ. ದೇವರು ಕೊಟ್ಟ ತಂಗಿ ಚಿತ್ರದ ಸೋಲಿನಿಂದ ಕಂಗೆಟ್ಟು ಆತ್ಮಹತ್ಯೆಗೆ ಯತ್ನಿಸಿ ಸಾವನ್ನು ಗೆದ್ದುಬಂದ ಸಾಯಿಪ್ರಕಾಶ್ಗೆ ಈ ಚಿತ್ರದ ಮೂಲಕ ಹೊಸ ಜೀವನವನ್ನು ನೀಡಿದ್ದಾರೆ.
ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಸಾಯಿಪ್ರಕಾಶ್, ಶಿವರಾಜ್ ಕುಮಾರ್ ಅಭಿನಯದ ದೇವರು ಕೊಟ್ಟ ತಂಗಿ ಚಿತ್ರವನ್ನು ತಾವೇ ನಿರ್ಮಾಣ ಮಾಡಿ ಸೋತರು. ಆದರೆ ಹೂಡಿದ ಬಂಡವಾಳವು ಬಾರದೆ, ಕೈತುಂಬಾ ಸಾಲದ ಹೊರೆಯನ್ನು ಹೊತ್ತರು. ತೀರಿಸಲು ದಾರಿ ಕಾಣದೆ ತಮ್ಮ ಎಲ್ಲಾ ಆಸ್ತಿಯನ್ನು ಮಾರಿದರು. ಆದರೂ ಸಾಲದಿಂದ ಪೂರ್ಣ ವಿಮುಕ್ತಿ ಪಡೆಯಲಾಗಲಿಲ್ಲ.
ಅದಕ್ಕೆ ಚಿತ್ರದ ನಾಯಕನನ್ನು ದೂರುವ ಅಗತ್ಯವಿಲ್ಲ. ಚಿತ್ರದ ಸೋಲು, ಗೆಲುವು ನನಗೆ ಸೇರಿದ ವಿಷಯ. ನಾನು ರಾಜ್ ಕುಟುಂಬದ ಆಶೀರ್ವಾದದಿಂದ ಬೆಳೆದು ಬಂದಿರುವೆ. ಉಪ್ಪು ತಿಂದ ಮನೆಗೆ ಎರಡು ಬಗೆಯುವುದಿಲ್ಲ ಎಂದು ತಮ್ಮ ಅಂತಃರಂಗದ ಭಾವನೆಯನ್ನೂ ಸಾಯಿಪ್ರಕಾಶ್ ಬಿಚ್ಚಿಟ್ಟಿದ್ದಾರೆ. ಸಾಲದ ಹೊರೆಯನ್ನು ತೀರಿಸಲು ಸಮಯ ಕೋರಿ ಕರ್ನಾಟಕ ರಾಜ್ಯ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.