ಅಪ್ಪ ಮಗಳೇ ನಾಯಕ ನಾಯಕಿಯರಾಗಿ ತೆರೆಯಲ್ಲಿ ರೊಮ್ಯಾನ್ಸ್ ಮಾಡಿ ಸಾಕಷ್ಟು ಕೆಂಗಣ್ಣಿಗೆ ತುತ್ತಾಗಿದ್ದ ಮುಸ್ಸಂಜೆ ಗೆಳತಿ ಚಿತ್ರ ನಿಮಗೆಲ್ಲಾ ನೆನಪಿರಬಹುದು. ಈಗ ಈ ಮುಸ್ಸಂಜೆಯ ಗೆಳತಿ ಚಿತ್ರದ ನಿರ್ಮಾಪಕ ಕಂ ನಟ ಕಂ ನಿರ್ದೇಶಕ ಬಿ.ಪಿ.ಶ್ರೀನಿವಾಸ್ ಅವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಆದರೆ ಮುಸ್ಸಂಜೆಯ ಗೆಳತಿ ಚಿತ್ರಕ್ಕೂ ಈ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ.
ಗೋವಾ ಮೂಲದ ಪ್ರಾಂಶುಪಾಲ ಎನ್.ಕೆ.ದಿವಾನ್ ಎಂಬವರು ಶ್ರೀನಿವಾಸ್ ಅವರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗೆ ಶ್ರೀನಿವಾಸ್ ಸಾಲ ಕೊಡಿಸುವುದಾಗಿ ಹೇಳಿ ತನ್ನಿಂದ ದೊಡ್ಡ ಮೊತ್ತದ ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ದಿವಾನ್ ದೂರು ನೀಡಿದ್ದರು.
ಬಿ.ಪಿ.ಶ್ರೀನಿವಾಸ್ ಬಂಧನಕ್ಕೊಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವಂಚನೆಯ ಆರೋಪದಡಿ ಅಂದೊಮ್ಮೆ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಇದು ಮತ್ತೊಂದು ಪ್ರಕರಣವಾಗಿದೆ.