ಚಾಲೆಂಜಿಂಗ್ ಸ್ಟಾರ್ ದರ್ಶನ್, ನವ್ಯಾ ನಾಯರ್ ಹಾಗೂ ರೇಖಾ ತಾರಾಗಣದ ಬಾಸ್ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇನ್ನು ಬಾಕಿ ಉಳಿದಿರುವುದು ಕೇವಲ ಪೋಸ್ಟ್ ಪ್ರೊಢಕ್ಷನ್ ಕಾರ್ಯ ಮಾತ್ರ. ರಂಗಾಯಣ ರಘು, ಉಮಾಶ್ರೀ, ಬುಲೆಟ್ ಪ್ರಕಾಶ್ ಮತ್ತಿತರರು ತಮ್ಮ ಡಬ್ಬಿಂಗ್ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡಬ್ಬಿಂಗ್ ಕೂಡಾ ಮುಗಿದಿದೆ.
ರಮೇಶ್ ಯಾದವ್ ನಿರ್ಮಾಣದ ಈ ಚಿತ್ರದ ನಿರ್ದೇಶಕರು ರಘು ರಾಜ್. ತಮಿಳು ನಟ ಶಿವಾಜಿ ಯಾದವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕ ರಮೇಶ್ ಯಾದವ್ ಹೇಳುವಂತೆ, ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ದರ್ಶನ್ ಹಾಗೂ ರೇಖಾ ಜೋಡಿಯ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ. ದರ್ಶನ್ ಅರ ಸೂಕ್ತ ಡೇಟಿಂಗ್ ಹೊಂದಿಸಿಕೊಂಡು ಚಿತ್ರದ ಶೂಟಿಂಗ್ ಪೂರ್ಣಗೊಳಿಸಲಾಗುತ್ತದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದ ಮೇಲೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ತಿಂಗಳಲ್ಲಿ ಚಿತ್ರದ ಅಡಿಯೋ ಕ್ಯಾಸೆಟ್ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕಾರ್ಯವನ್ನೂ ಮಾರ್ಚ್ ಅಂತ್ಯದಲ್ಲಿ ಚಿತ್ರತಂಡ ಕೈಗೊಳ್ಳಲಿದೆಯಂತೆ.