ಹಿಂದಿನ ಹಿಟ್ ಚಿತ್ರ 'ಅಂತ'ದ ರಿಮೇಕ್ ಅವತರಣಿಕೆ, ಸುದೀಪ್ ನಿರ್ದೇಶನ ಹಾಗೂ ನಟನೆಯ ಕನ್ವರ್‌ಲಾಲ್ ಚಿತ್ರದಿಂದ ನನಗೆ ಈವರೆಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಬಹುಭಾಷಾ ನಟಿ, ಬೆಂಗಳೂರು ಬೆಡಗಿ ಪ್ರಿಯಾಮಣಿ ಹೇಳಿದ್ದಾರೆ. ಇತ್ತೀಚೆಗೆ ರಾಮ್ ಚಿತ್ರದಲ್ಲಿ ಪುನೀತ್ ಜೊತೆ ಹೊಸ ಗಾನ ಬಜಾನಾ.. ಎಂದು ಕುಣಿದ ಈ ಬೆಡಗಿ ಪ್ರಿಯಾಮಣಿ, ಕನ್ನಡದ ಚಿತ್ರರಂಗದಲ್ಲಿ ಹಬ್ಬಿದ್ದ ಗಾಸಿಪ್‌ಗೆ ಅಂತ್ಯ ಹಾಡಿದ್ದಾರೆ. ಕನ್ವರ್ ಲಾಲ್ಲ ಚಿತ್ರದಲ್ಲಿ ಸುದೀಪ್ ಹಾಗೂ ಅಂಬರೀಷ್ ಜೊತೆ ಪ್ರಿಯಾಮಣಿ ನಟಿಸಲಿದ್ದಾರೆ ಎಂಬ ಪುಕಾರು ಇತ್ತೀಚೆಗೆ ಗಾಂಧಿನಗರಿಯಲ್ಲಿ ಹಬ್ಬಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಮಣಿ, ಈವರೆಗೆ ಈ ಚಿತ್ರಕ್ಕಾಗಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸದ್ಯಕ್ಕೆ ನಾನು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ ಏನೋ ಒಂಥರಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಏನೋ ಒಂಥರಾ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಮೂರು ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ. ರಾಮ್, ಏನೋ ಒಂಥರಾ ಚಿತ್ರಗಳ ನಂತರ ಬೇರಾವುದೇ ಕನ್ನಡ ಚಿತ್ರಕ್ಕೆ ಸಹಿ ಮಾಡಿಲ್ಲ. ಉತ್ತಮ ಅವಕಾಶಗಳು ಬಂದರೆ ಖಂಡಿತ ನಟಿಸುತ್ತೇನೆ. ಮೊದಲು ಕಥೆ ಕೇಳಿ ನನಗೆ ಇಷ್ಟವಾದರೆ ಖಂಡಿತ ಚಿತ್ರಕ್ಕೆ ಒಕೆ ಹೇಳುತ್ತೇನೆ ಎನ್ನುತ್ತಾರೆ ಪ್ರಿಯಾಮಣಿ.
ಏನೋ ಒಂಥರಾ ಚಿತ್ರದ ನಂತರ ಪ್ರಿಯಾಮಣಿ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.