2010ನೇ ವರ್ಷ ನಟ ನಾಗಕಿರಣ್ ಪಾಲಿಗೆ ಅವಕಾಶಗಳ ವರ್ಷವಾಗುವುದರಲ್ಲಿ ನಿಸ್ಸಂದೇಹವಿಲ್ಲ. ಮಸ್ತ್ ಮಜಾ ಮಾಡಿ ಚಿತ್ರದ ನಂತರ ಅವಕಾಶಗಳ ಮಹಾಪೂರವೆ ಹರಿದು ಬರುತ್ತಿದೆ. ಅವರು ಅಭಿನಯದ ಲಹರಿ ಚಿತ್ರವು ಏಪ್ರಿಲ್ನಲ್ಲಿ ಬಿಡುಗಡೆಯಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ನಾಗಕಿರಣ್.
ಕೆರೆಮಲು ಬದ್ರಿ ನಿರ್ಮಿಸುತ್ತಿರುವ ವೀರೇಶ್ ದೊಡ್ಡಬಳ್ಳಾಪುರ ನಿರ್ದೇಶನ ಮಾಡುತ್ತಿರುವ ಮಾಯದಂಥ ಮಳೆ ಚಿತ್ರ ಇದೇ 18ರಂದು ಸೆಟ್ಟೇರುತ್ತಿದೆ. ಇದು ನಿರ್ದೇಶಕರ ಮೊದಲ ಚಿತ್ರವಾಗಿದ್ದು, ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಾಗಕಿರಣ್ ಜೊತೆಗೆ ಮತ್ತೊಬ್ಬ ನಾಯಕ ರವಿಚೇತನ್ ಅಭಿನಯಿಸುತ್ತಿದ್ದಾರೆ. ಮಾಯದಂಥ ಮಳೆ ಚಿತ್ರದಲ್ಲಿ ಗಾಳಿಪಟ ಚಿತ್ರದ ಭಾವನ ರಾವ್ ಮತ್ತು ಚೆಲುವಿನ ಚಿಲಿಪಿಲಿಯ ರೂಪಿಕಾ ನಾಯಕಿಯರು.
ಚಿತ್ರದಲ್ಲಿ ಶರತ್ ಬಾಬು, ತಾರಾ, ಶ್ರೀನಿವಾಸ್ ಮೂರ್ತಿ, ಪದ್ಮಜಾರಾವ್, ವೀಣಾಸುಂದರ್, ಋತು, ಹೊನ್ನವಳ್ಳಿಕೃಷ್ಣ, ಶಂಕರ್ ಇದ್ದಾರೆ. ಇವರ ಜೊತೆಗೆ ವಿಶೇಷ ಪಾತ್ರದಲ್ಲಿ ಶೃತಿಯನ್ನು ಕಾಣಬಹುದು.
ಇಷ್ಟೇ ಅಲ್ಲ, ಮಲಯಾಳಂನ ನೈವೇದ್ಯಂ, ತಮಿಳಿನ ಪಟ್ಟಿಯಾಲ್ ರಿಮೇಕ್ ಚಿತ್ರಗಳಲ್ಲೂ ನಾಗ್ ನಟಿಸುತ್ತಿದ್ದಾರೆ. ನೈವೇದ್ಯಂ ಚಿತ್ರಕ್ಕೆ ಸಾಧು ಕೋಕಿಲರ ಸಹೋದರ ಲಯೇಂದ್ರ ಸಂಗೀತ ನೀಡುತ್ತಿದ್ದಾರೆ. ಉಮರ್ ಷರೀಫ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಅವರ ಸರಿಗಮ ಚಿತ್ರದಲ್ಲೂ ನಾಗಕಿರಣ್ ನಟಿಸುತ್ತಿದ್ದಾರೆ. ಹರೀಶ್ ಎಂಬವರು ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಬಗ್ಗೆ ಮಾತುಕತೆ ನಡೆಯುತ್ತಿದೆ. 2010ರಲ್ಲಾದರೂ ನಾಗಕಿರಣ್ಗೆ ಗೆಲುವು ಒಲಿಯುತ್ತಾ ಕಾಯಬೇಕು.