ಹಿರಿಯ ಹಾಗೂ ಜನಪ್ರಿಯ ನಟರ ಮಕ್ಕಳು ಚಿತ್ರರಂಗದಲ್ಲಿ ಪರೀಕ್ಷೆ ಎದುರಿಸಿದ್ದಾರೆ. ಹಲವರು ತಮ್ಮ ಜಾಗವನ್ನು ಭದ್ರಗೊಳಿಸಿದ್ದರೆ, ಇನ್ನು ಕೆಲವರು ಗೆಲುವಿನ ಹುಡುಕಾಟದಲ್ಲಿದ್ದಾರೆ.
ಅದೇನೆ ಇರಲಿ, ಇದೀಗ ಹಿರಿಯ ನಟ ಕಲ್ಯಾಣ ಕುಮಾರ್ ಮಗ ಭರತ್ ಸಿನಿಮಾ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ತಂದೆಯ ಅವಸಾನದ ನಂತರ ಚೆನ್ನೈನಲ್ಲಿ ನೆಲೆಯೂರಿದ್ದ ಭರತ್ ಗಾಂಧಿನಗರಕ್ಕೆ ಬಂದಿದ್ದಾರೆ. ಬಂದಿದ್ದಾರೆ ಅನ್ನುವುದಕ್ಕಿಂತ ಅವರನ್ನು ಕರೆಸಿದಿದ್ದಾರೆ ನಿರ್ದೇಶಕ ನಾಗನಾಥ ಜೋಶಿ.
ಕೆಲ ತಿಂಗಳ ಹಿಂದಷ್ಟೇ ತೆರೆಕಂಡ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಜಾಲದ ನಿರ್ದೇಶಕರು ಇವರು. ಈ ಚಿತ್ರ ಗೆದ್ದಿದಿಯೋ ಇಲ್ಲವೋ ಗೊತ್ತಿಲ್ಲ, ಆದರೆ ಸೋಲನ್ನು ಮರೆತು ಈಗ ಮತ್ತೊಮ್ಮೆ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರದ ಹೆಸರು ಎಕ್ಕ. ಈ ಬಾರಿ ಲೆಕ್ಕವನ್ನು ತಪ್ಪಿಸಿಯಾದರೂ ಎಕ್ಕ್ ಹಿಟ್ ಮಾಡಬೇಕೆಂಬ ಉದ್ದೇಶದಿಂದ ಹೊಸ ಜಾಲ ಹೆಣೆದಿದ್ದಾರೆ ಜೋಶಿ.
ಇಲ್ಲಿ ಎಕ್ಕ ಎಂದರೆ ಇಸ್ಪೀಟ್ ಆಟ ಅಲ್ಲ. ಇದರ ಪ್ರಕಾರ ರಾಜ, ವೀರ, ಶೂರ, ಹೀರೋ ಎಂದರ್ಥವಂತೆ. ನಾಯಕ ಎಕ್ಕನಂತೆ ಬಹು ಬಲಿಶಾಲಿ. ದಷ್ಟಪುಷ್ಟ. ಹೀಗೆ ಲೀಲಾಜಾಲವಾಗಿ ಕಥೆಯನ್ನೂ ಹಣೆದಿದ್ದಾರೆ ಜೋಶಿ. ಜೊತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ!
ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಎರಡು ತಿಂಗಳ ಒಳಗೆ ತೆರೆಕಾಣಲಿದೆ. ಚಿತ್ರಕ್ಕೆ ಯುವ ತಾರೆ ಅಭಿಲಾಶಾ ನಾಯಕಿ. ಅಂದಹಾಗೆ, ತಮಿಳಿನಲ್ಲಿ ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಭರತ್ ಕಲ್ಯಾಣ್ ಕನ್ನಡದಲ್ಲೂ ಮಿಂಚಲಿ.