ಅಂತೂ ನಂಜನಗೂಡು ನಂಜುಂಡ ತೆರೆಗೆ ಸಿದ್ಧವಾಗಿದೆ. ಇದು ಇಪ್ಪತ್ತು ವರ್ಷದ ಹಿಂದಿನ ಮಳೆಯಾಲಂ ಚಿತ್ರದ ರೀಮೇಕ್. ಈ ಚಿತ್ರವನ್ನು ಕನ್ನಡ ಭಟ್ಟಿ ಇಳಿಸಿದವರು ನಿರ್ಮಾಪಕ ಸುಭಾಷ್.
ನಿರ್ಮಾಪಕರು ಮಳೆಯಾಲಂ ಚಿತ್ರ ನೋಡಿ ಇದನ್ನು ಕನ್ನಡದಲ್ಲಿ ಮಾಡಬೇಕೆಂದುಕೊಂಡರಂತೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ತಾಕತ್ತು ನಿರ್ದೇಶಕ ಶ್ರೀನಿವಾಸ್ ಪ್ರಸಾದ್‌ಗೆ ಇದೆ ಎಂದನಿಸಿ ಅವರಿಗೆ ನೀಡಿದರು. ಚಿತ್ರಕ್ಕೆ ನಾಯಕನಾಗಿ ಪಯಣ ಖ್ಯಾತಿಯ ರವಿಶಂಕರ್ ಲಾಯಕ್ಕು ಎಂದು ಅವರನ್ನೂ ಕರೆಸಿಕೊಂಡರು. ಚಿತ್ರದ ಹಾಡಿಗೆ ಸೋನು ನಿಗಮ್, ಕುನಾಲ್ ಗಾಂಜಾವಾಲಾ, ಶ್ರೇಯಾಘೋಷಾಲ್ ಮೊದಲಾದ ದುಬಾರಿ ಗಾಯಕ-ಗಾಯಕಿಯರನ್ನು ಕರೆಸಿದ್ದಾರೆ. ಈಗ ಎಲ್ಲವೂ ಸುಸೂತ್ರವಾಗಿ ಮುಗಿದಿದೆ. ಮುಂದಿನ ತಿಂಗಳು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ಸುಭಾಷ್.
ಸಂಶಯಸ್ಥ ಗಂಡ, ಕಂಡ ಕಂಡವರ ಮಾತಿಗೆ ಜೋತು ಬಿದ್ದು, ಹೆಂಡತಿಯನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಾನೆ. ಆಗ ಏನೆಲ್ಲಾ ಪಡಿಪಾಟಲು ಪಡುತ್ತಾನೆ ಎಂಬುದು ಚಿತ್ರದ ಕಥಾಹಂದರ. ಮೊದಲ ಚಿತ್ರ ಪಯಣದಲ್ಲಿ ಹೆಚ್ಚು ಕಾಮಿಡಿ ಇರಲಿಲ್ಲ. ಇಲ್ಲಿ ಹಾಗಲ್ಲ. ಚಿತ್ರ ಹಾಸ್ಯದ ಜತೆ ಹೊಸೆದುಕೊಂಡಿದೆ. ಅದಕ್ಕೆ ಇಷ್ಟಪಟ್ಟು ಒಪ್ಪಿಕೊಂಡೆ ಎನ್ನುತ್ತಾರೆ ರವಿಶಂಕರ್.
ಅಂತೂ ಸುಭಾಷ್ ಕಂಡ ಕನಸಿಗೆ ರವಿಶಂಕರ್ ಮತ್ತು ಶ್ರೀನಿವಾಸ್ ನೀರೆರೆದು ಪೋಷಿಸಿ ಒಂದು ಹಂತಕ್ಕೆ ತಂದಿದ್ದಾರೆ. ಮುಂದಿನ ಭವಿಷ್ಯ ಪ್ರೇಕ್ಷಕನ ಕೈಯಲ್ಲಿದೆ ಎನ್ನುವುದು ಗಾಂಧಿನಗರದ ಪಂಡಿತರ ಅಂಬೋಣ.