ನಿರ್ದೇಶಕ ಪಿ. ವಾಸು ಕನ್ನಡ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆಪ್ತರಕ್ಷಕ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಪ್ರತಿಕ್ರಿಯಿಸಿರುವ ಬಗ್ಗೆ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಆಪ್ತಮಿತ್ರದ ಎರಡನೇ ಭಾಗವಾಗಿ ಮೂಡಿ ಬಂದಿರುವ ಈ ಚಿತ್ರ ಯಶಸ್ಸಾಗುವುದು ಕಡಿಮೆ, ಯಾಕೆಂದರೆ ಅಲ್ಲಿ ಹಳೆ ಸಿದ್ದಾಂತವನ್ನೇ ಅಲ್ಲಿರುತ್ತದೆ ಎಂಬುದು ಗಾಂಧಿನಗರದ ಪಂಡಿತರ ಮಾತಾಗಿತ್ತು.
ಆದರೆ ಈ ಬಾರಿ ಹಾಗಾಗಲಿಲ್ಲ. ಜನತೆ ಪ್ರೀತಿಯಿಂದ ಚಿತ್ರ ನೋಡಿ ಶಹಬ್ಬಾಸ್ ಎಂದಿದ್ದಾರೆ. ಇದು ವಿಷ್ಣು ಅಭಿನಯದ ಕೊನೆ ಚಿತ್ರ ಎಂಬುದಕ್ಕಿಂತಲೂ ಚಿತ್ರ ಅದ್ಭುತವಾಗಿದೆ ಎಂದವರೇ ಹೆಚ್ಚು. ಇದೇ ಆಪ್ತಮಿತ್ರ ಬಿಡುಗಡೆಗೂ ಮುನ್ನ ಸೌಂದರ್ಯ ಇಹಲೋಕ ತ್ಯಜಿಸಿದ್ದರು. ರಕ್ಷಕ ಬರುವ ಮುನ್ನ ಆಪ್ತರಾದ ವಿಷ್ಣು ಕಣ್ಣು ಮುಚ್ಚಿದ್ದರು. ಈ ಕಾರಣಕ್ಕಾಗಿ ಚಿತ್ರ ಗೆದ್ದಿದೆ ಎಂದು ಕೆಲವರು ಲೆಕ್ಕಾಚಾರ ಹಾಕಿದರೂ, ಖಂಡಿತ ಹಾಗಾಗಿಲ್ಲ ಎಂಬುದಕ್ಕೆ ಚಿತ್ರಮಂದಿರ ಕಿಕ್ಕಿರಿದು ತುಂಬುತ್ತಿರುವುದೇ ಸಾಕ್ಷಿ.
ಚಿತ್ರದಲ್ಲಿ ಕೋಮಲ್ ಮತ್ತು ವಿಷ್ಣು ಅವರ ಹಾಸ್ಯವಿದೆ. ನಾಗವಲ್ಲಿಯ ನಾಟ್ಯ ಲೀಲೆಯಿದೆ. ಪೋಷಕ ನಟರ ಗತ್ತು ಗಮ್ಮತ್ತಿದೆ. ಇವೆಲ್ಲಾವುದರ ಪ್ರತಿಫಲವೇ ಚಿತ್ರದ ಗೆಲುವಿಗೆ ಕಾರಣ ಎಂಬುದು ವಾಸು ಅಭಿಪ್ರಾಯ.
ಇದರ ಜೊತೆಗೆ ವಿಷ್ಣು ಅವರನ್ನು ನೆನೆಸಿಕೊಂಡ ವಾಸು. ಅವರೊಂದಿಗೆ ಕಳೆದ ಆ ಅವಿಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿದರು. ಜೊತೆಗೆ ಈ ಚಿತ್ರವನ್ನು ಮುಂದಿನ ದಿನಗಳಲ್ಲಿ ತೆಲುಗು ಮತ್ತು ತಮಿಳಿಗೂ ರಿಮೇಕ್ ಮಾಡುವ ಸೂಚನೆಯನ್ನು ನೀಡಿದರು. ಇದು ಯಶಸ್ಸಿನ ಮುಂದಿನ ಭಾಗ ಅಂದರೆ ತಪ್ಪಲ್ಲ ಅಲ್ಲವೇ?