ಕನ್ನಡದ ಪವರ್ ಸ್ಟಾರ್ ಪುನೀತ್ಗೆ ಇಂದು ತಮ್ಮ 35ನೇ ವರ್ಷದ (ಮಾ.17) ಹುಟ್ಟುಹಬ್ಬದ ಸಂಭ್ರಮ. ತಮ್ಮ ಅಭಿಮಾನಿಗಳ ಜೊತೆ ಬೆಂಗಳೂರಿನ ತಮ್ಮ ಗಂಗೇನಹಳ್ಳಿಯ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಪುನೀತ್ ಸಂಭ್ರಮಾಚರಣೆಯ ಖುಷಿಯಲ್ಲಿದ್ದರು. ಈ ಸಂದರ್ಭ ಖುಷಿ ಹಂಚಿಕೊಂಡ ಪುನೀತ್, ಉತ್ತಮ ಕಥೆ ಸಿಕ್ಕರೆ ಅಣ್ಣಂದಿರಾದ ಶಿವರಾಜ್ ಹಾಗೂ ರಾಘವೇಂದ್ರ ಜೊತೆಗೆ ಮೂವರೂ ಒಂದೇ ಚಿತ್ರದಲ್ಲಿ ನಟಿಸುವುದಾಗಿ ಹೇಳಿದರು. ಆದರೆ ಉತ್ತಮ ಚಿತ್ರ, ಉತ್ತಮ ನಿರ್ದೇಶಕ ಸಿಕ್ಕುವವರೆಗೂ ಈ ಕನಸು ನನಸಾಗಲು ಸಾಧ್ಯವಿಲ್ಲ ಎಂದೂ ಹೇಳಿದರು.
ಇದೇ ಸಂದರ್ಭ ಇದೇ ದಿನ ಹುಟ್ಟುಹಬ್ಬ ಆಚರಿಸುತ್ತಿರುವ ಜಗ್ಗೇಶ್ ಅವರಿಗೂ ಹುಟ್ಟುಹಬ್ಬದ ಶುಭಾಶಯ ಹೇಳಿದ ಪುನೀತ್, ಜಗ್ಗೇಶ್ ಅವರು ನಮ್ಮ ಕುಟುಂಬದ ದೊಡ್ಡ ಸಪೋರ್ಟ್. ನಾನು ಜಗ್ಗೇಶ್ ಅವರ ಅಭಿಮಾನಿ. ಅವರಿಗೆ ನನ್ನ ಶುಭಾಶಯ ಎಂದರು.
ಇದೇ ಸಂದರ್ಭ, ಅಪ್ಪಾಜಿಯವರಿಗೆ ಅಪ್ಪಾಜಿಯವರೇ ಸಾಟಿ. ನಾವ್ಯಾರೂ ಅವರ ಮಟ್ಟಿಗೆ ಬೆಳೆಯಲು ಸಾಧ್ಯವೇ ಇಲ್ಲ. ನಾನು ಅವರ ಮಗ ಎಂಬುದಕ್ಕಿಂತಲೂ ಅವರ ದೊಡ್ಡ ಅಭಿಮಾನಿ. ನಾವು ಮೂರು ಜನ ಸೇರಿದ್ರೂ ಅವರು ಮಾಡಿದ್ದನ್ನು ನಮ್ಮ ಕೈಲಿ ಮಾಡಲು ಸಾಧ್ಯವಿಲ್ಲ ಎಂದರು.
ಪುನೀತ್ ಹುಟ್ಟಿದ್ದು 1975ರಲ್ಲಿ. ಆದರೆ ಡಾ.ರಾಜ್ ಜೊತೆಗೆ ಸಣ್ಣವನಿದ್ದಾಗಲೇ ಅವರ ಹಲವು ಚಿತ್ರಗಳಲ್ಲಿ ಮಗನಾಗಿ ನಟಿಸಿದ ಪುನೀತ್ಗೆ ಬಾಲನಟನಾಗಿ 1976ರಿಂದಲೇ ಚಿತ್ರರಂಗದ ನಂಟಿದೆ. ಪ್ರೇಮದ ಕಾಣಿಕೆ, ಸನಾದಿ ಅಪ್ಪಣ್ಣ, ವಸಂತ ಗೀತಾ, ಭಾಗ್ಯವಂತ, ಹೊಸ ಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂವು, ಪರಶುರಾಮ ಸೇರಿದಂತೆ 1989ರವರೆಗೂ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ಪುನೀತ್ ಮತ್ತೆ ಚಿತ್ರರಂಗಕ್ಕೆ ಮರು ಎಂಟ್ರಿ ಕೊಟ್ಟಿದ್ದು ನಾಯಕನಾಗಿ 2002ರಲ್ಲಿ.
2002ರಲ್ಲಿ ಬಿಡುಗಡೆಯಾದ ಪುನೀತ್ ನಾಯಕನಾಗಿ ನಟಿಸಿದ ಚೊಚ್ಚಲ ಚಿತ್ರ ಅಪ್ಪು 200 ದಿನಗಳ ಕಾಲ ಮುನ್ನುಗ್ಗಿತು. ನಂತರ ಬಂದ ಚಿತ್ರಗಳಲ್ಲೂ ಬಹುತೇಕ ಚಿತ್ರಗಳ ಶತದಿನೋತ್ಸವ ಆಚರಿಸಿಕೊಂಡವು. ಅಭಿ (125 ದಿನಗಳು), ವೀರ ಕನ್ನಡಿಗ (115 ದಿನಗಳು), ಮೌರ್ಯ (125 ದಿನಗಳು), ಆಕಾಶ್ (200 ದಿನಗಳು), ನಮ್ಮ ಬಸವ (125 ದಿನಗಳು), ಅಜಯ್ (100 ದಿನಗಳು), ಅರಸು (125 ದಿನಗಳು), ಮಿಲನ (450 ದಿನಗಳು), ಬಿಂದಾಸ್ (100 ದಿನಗಳು), ವಂಶಿ (125 ದಿನಗಳು), ರಾಜ್- ದಿ ಶೋ ಮ್ಯಾನ್ (100 ದಿನಗಳು), ರಾಮ್ (ಈಗಾಗಲೇ 80 ದಿನಗಳನ್ನು ಪೂರೈಸಿದೆ) ಹೀಗೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ಪವರ್ ಸ್ಟಾರ್ ಪುನೀತ್ ಚಿತ್ರಗಳ ಪೈಕಿ ಸೋತ ಚಿತ್ರಗಳು ಗೌಣ. ಪುನೀತ್ ಚಿತ್ರ ಎಂದರೆ ಕಥೆ ಚೆನ್ನಾಗಿರುತ್ತದೆ, ಫ್ಯಾಮಿಲಿ ಕೂತು ಮನೋಡಬಹುದಾದ ಚಿತ್ರ ಎಂಬೆಲ್ಲಾ ಮಾತುಗಳೂ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಹಾಗಾಗಿಯೇ ಅವರು ಕನ್ನಡ ಚಿತ್ರರಂಗದ 'ಪವರ್ ಸ್ಟಾರ್'!
ಸದ್ಯಕ್ಕೆ ಪುನೀತ್ ಕೈಯಲ್ಲಿ ಪೃಥ್ವಿ ಹಾಗೂ ಜಾಕಿ ಚಿತ್ರಗಳಿವೆ. ಸೂರಿ ನಿರ್ದೇಶನದ ಜಾಕಿಯ ಮೇಲೆ ಪುನೀತ್ಗೆ ಅಪಾರ ಭರವಸೆಯಿದೆ. ಪೃಥ್ವಿಯಲ್ಲೂ ತ್ಮ ಹಾಗೂ ಪಾರ್ವತಿ ಜೋಡಿ ಮೋಡಿ ಮಾಡಬಹುದೆಂಬ ಅಪಾರ ವಿಶ್ವಾಸವೂ ಅವರಿಗಿದ್ದು, ಸದ್ಯವೇ ಇದು ತೆರೆಗೆ ಬರಲಿದೆ.
ಪುನೀತ್ ಅವರ ಅಭಿನಯಕ್ಕೆ ಸಾಟಿಯಾಗಿ ಸಾಲು ಸಾಲು ಪ್ರಶಸ್ತಿಗಳೂ ಸಂದಿವೆ. 1986ರಲ್ಲಿ ಬೆಟ್ಟದ ಹೂವು ನಟನೆಗೆ ಅತ್ಯುತ್ತಮ ಬಾಲನಟ ಎಂಬ ರಾಷ್ಟ್ರಪ್ರಶಸ್ತಿ ಪುನೀತ್ಗೆ ಸಂದಿದೆ. ನಂತರ 2007ರಲ್ಲಿ ಅರಸು ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ದೊರೆತಿದೆ. ಮಿಲನ ಚಿತ್ರಕ್ಕಾಗಿ ಅತ್ಯುತ್ತಮ ನಟನೆಂಬ ರಾಜ್ಯಪ್ರಶಸ್ತಿಯೂ ಸಂದಿದೆ.
ಭಾಗ್ಯವಂತ ಚಿತ್ರದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..., ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ನಮ್ಮ ಶಿವ..., ಭಕ್ತ ಪ್ರಹ್ಲಾದ ಚಿತ್ರದ್ಲಲಿ ನಾರಾಯಣ ಹರಿ ನಾರಾಯಣ..., ಬೆಟ್ಟದ ಹೂವು ಚಿತ್ರದಲ್ಲಿ ಬಿಸಿಲೇ ಇರಲಿ ಮಳೆಯೇ ಬರಲಿ.... ಸೇರಿದಂತೆ ಬಾಲನಟನಾಗಿರುವಾಗಲೇ ತನ್ನ ಪಾತ್ರಗಳಿಗೆ ಹಾಡಿದ ಪುನೀತ್, ನಂತರ ಅಪ್ಪು ಚಿತ್ರದಲ್ಲಿ ತಾಲಿಬಾನ್ ಅಲ್ಲ ಅಲ್ಲ..., ಅಭಿಯಲ್ಲಿ ಮಾಮಾ ಮಾ ಮಜಾ ಮಾಡು..., ವೀರ ಕನ್ನಡಿಗದಲ್ಲಿ ನಾಯ್ರೇ ನಾಯ್ರೇ..., ಮೌರ್ಯದಲ್ಲಿ ಸಿಂಪಲ್ ಆಗಿ ಹೇಳ್ತೀನ್ ಕೇಳೇ ನಮ್ಮೂರ ಭಾಷೆ..., ಆಕಾಶ್ನಲ್ಲಿ ಹೊಡಿ ಹೊಡಿ ಹೊಡಿ ಡೋಲು ಹೊಡಿ.., ನಮ್ಮ ಬಸವದಲ್ಲಿ ರುಕ್ಕು ರುಕ್ಕು ರುಕ್ಕಮ್ಮ..., ಶಿವಣ್ಣ ಅಭಿನಯದ ಲವಕುಶ ಚಿತ್ರದಲ್ಲಿ ಹಾಟಪ್ಪ ಹಾಟು ಸಕತ್ತು ಹಾಟು....ಬಿಂದಾಸ್ ಚಿತ್ರದಲ್ಲಿ ಬೆಂಗಳೂರು ಮಂಗಳೂರು ಎಲ್ಲಿ ಹೋದ್ರು ಬಿಂದಾಸ್..., ವಂಶಿಯಲ್ಲಿ ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ... ರಾಮ್ ಚಿತ್ರದ ಹೊಸ ಗಾನ ಬಜಾನಾ.. ಸೇರಿದಂತೆ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಬಾಲನಟನಾಗಿ ಹಾಡಿದ ಬಿಸಿಲೇ ಇರಲಿ... ಬಾನ ದಾರಿಯಲ್ಲಿ ಸೂರ್ಯ...ಕಾಣದಂತೆ ಮಾಯವಾದನೋ... ಮತ್ತಿತರ ಹಲವಾರು ಹಾಡುಗಳು ಇಂದಿಗೂ ಜನಮನದಲ್ಲಿ ಅನುರಣಿಸುತ್ತಿವೆ. ಈಗಿನ ಹೊಸ ಗಾನಾ ಬಜಾನಾ ಹಾಡು ಕೂಡಾ ಸಾಕಷ್ಟು ಸುದ್ದಿ ಮಾಡಿದೆ.
ಪುನೀತ್ ಸಿನಿಮಾ ರಂಗಕ್ಕೆ ನಾಯಕನಾಗಿ ಕಾಲಿಡುವ ಮೊದಲು ಬಾಲನಟನಾಗಿ ನಟಿಸಿದ ಅಭ್ಯಾಸವಿದ್ದರೂ ನಟನೆಯಲ್ಲಿ ಮೂರು ವರ್ಷಗಳ ತರಬೇತಿಯನ್ನೂ ಪಡೆದಿದ್ದರು. ಕಲರಿಪಯಟ್ಟು ಹಾಗೂ ಮಾರ್ಶಿಯಲ್ ಆರ್ಟ್ಸ್ ಕಲೆಯಲ್ಲಿ ನಿಷ್ಣಾತರಾದ ಪುನೀತ್, ನಾಯಕನಟನಾಗಿ ಕಾಲಿಡುವ ಮೊದಲು ಕಂಪ್ಯೂಟರ್ ಸೈನ್ಸ್ನಲ್ಲಿ ಡಿಪ್ಲೊಮಾ ಪಡೆದು ಗಣಿ ಬ್ಯುಸಿನೆಸ್ ನಡೆಸುತ್ತಿದ್ದರು. ಸದ್ಯಕ್ಕೆ ಪುನೀತ್ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಂ.1 ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುನೀತ್ ಅಭಿನಯದ ಯಾವ ಚಿತ್ರಗಳೂ ನಿರ್ಮಾಪಕರಿಗೆ ನಷ್ಟ ತಂದುಕೊಟ್ಟಿಲ್ಲ ಎಂಬ ಕಿರೀಟವೂ ಪುನೀತ್ ತಲೆಯಲ್ಲಿದೆ.
ಕನ್ನಡ ಪವರ್ ಸ್ಟಾರ್ ಪುನೀತ್ಗೆ ಹುಟ್ಟುಹಬ್ಬದ ಶುಭಾಷಯಗಳು. ಇನ್ಯಾಕೆ ತಡ, ನೀವೂ ವಿಶ್ ಮಾಡಿ.