ಎಸ್.ನಾರಾಯಣ್ ನಿರ್ದೇಶನದ ಸುದೀಪ್- ಅಂಬರೀಷ್ ತಾರಾಗಣದ ವೀರ ಪರಂಪರೆ ಚಿತ್ರಕ್ಕೆ ಮುದ್ದುಮುಖದ ಬೆಡಗಿ ಐಂದ್ರಿತಾ ರೇ ಆಯ್ಕೆಯಾಗಿದ್ದಾರೆ. ಇದೇ ಏ.2ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ನಡೆಯಲಿದೆ.
ಎಸ್. ನಾರಾಯಣ್ ಅವರು ಇತ್ತೀಚೆಗೆ ತಮ್ಮ ಚಿತ್ರ ವೀರ ಪರಂಪರೆಗೆ ನಾಯಕಿಯ ಹುಡುಕಾಟದಲ್ಲಿದ್ದರು. ಇದೀಗ ಅವರ ಹುಡುಕಾಟ ಅಂತ್ಯಗೊಂಡಿದ್ದು, ಐಂದ್ರಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸ್ವತಃ ಎಸ್. ನಾರಾಯಣ್ ಬಹಿರಂಗಪಡಿಸಿದ್ದಾರೆ.
ಐಂದ್ರಿತಾ ಈಗಾಗಲೇ ಕೆಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರೂ, ಹಿರಿಯ ನಟರ ಜೊತೆಗೆ ತೆರೆ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಸುದೀಪ್‌ರಂತಹ ಅನುಭವಿ ಯಶಸ್ವೀ ನಟನೊಂದಿಗೆ ಐಂದ್ರಿತಾ ಬಣ್ಣ ಹಚ್ಚುತ್ತಿದ್ದು, ಸಹಜವಾಗಿಯೇ ಐಂದ್ರಿತಾ ಥ್ರಿಲ್ಲಾಗಿ ಉಬ್ಬಿಹೋಗಿದ್ದಾರೆ. ಅಂಬರೀಷ್ ಅವರೊಂದಿಗೆ ಈ ಮೊದಲೇ ಐಂದ್ರಿತಾ ವಾಯುಪುತ್ರ ಚಿತ್ರದಲ್ಲಿ ಬಣ್ಣಹಚ್ಚಿದ್ದರು. ಹೀಗಾಗಿ ಅಂಬಿ ಜೊತೆಗೆ ಐಂದ್ರಿತಾಗೆ ಎರಡನೇ ಬಾರಿ ಬಣ್ಣ ಹಚ್ಚುವ ಅವಕಾಶ ಲಭ್ಯವಾಗಿದೆ.
ಸದ್ಯ ಐಂದ್ರಿತಾ ಗಾಂಧಿನಗರದಲ್ಲಿ ಓಡುವ ಕುದುರೆ. ಜಂಗ್ಲಿ, ಮನಸಾರೆಯ ನಂತರವಂತೂ ಐಂದ್ರಿತಾಗೆ ಸಾಕಷ್ಟು ಆಫರ್‌ಗಳು ಒಂದಾದ ಮೇಲೊಂದರಂತೆ ಬರುತ್ತಿವೆ. ಆದರೆ ಈಗ ಐಂದ್ರಿತಾ ಬರುವ ಆಫರ್‌ಗಳೆಲ್ಲವನ್ನೂ ಸ್ವೀಕರಿಸುತ್ತಿಲ್ಲವಂತೆ. ಉತ್ತಮ ಕಥೆಯುಳ್ಳ, ದೊಡ್ಡ ಬ್ಯಾನರಿನ, ಹೆಸರಾಂತ ನಿರ್ದೇಶಕರ ಜೊತೆ ಕೆಲಸ ಮಾಡಲು ತೀರ್ಮಾನಿಸಿ ತಾಳ್ಮೆಯಿಂದ ಉತ್ತಮ ಅವಕಾಶವನ್ನು ಐಂದ್ರಿತಾ ಬಾಚಿಕೊಳ್ಳುತ್ತಿದ್ದಾರೆ. ಈ ತಾಳ್ಮೆ ಐಂದ್ರಿತಾಗೆ ವರ ನೀಡಿದೆ ಅಂತನಿಸುತ್ತೆ. ಹೀಗಾಗಿ ಸುದೀಪ್ ಅವರೊಂದಿಗೆ ಜೋಡಿಯಾಗುವ ಅವಕಾಶ ಐಂದ್ರಿತಾಗೆ ಲಭ್ಯವಾಗಿದೆ.