ಬಾಲಿವುಡ್ಡಿನಲ್ಲಿ ಒಂದು ಚಿತ್ರದಲ್ಲಿ ಕಾಣಿಸಿಕೊಂಡು ಇದೀಗ ದಕ್ಷಿಣದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ತಯಾರಾಗಿದ್ದಾಳೆ ಶೀನಾ ಶಹಬಾದಿ. ನೋಡಲು ತೆಳ್ಳಗೆ, ಬೆಳ್ಳಗೆ ಬಳುಕುವ ಬಳ್ಳಿಯಂತಿರುವ ಶೀನಾ ಶಹಬಾದಿ ತೇರೇ ಸಂಗ್ ಎಂಬ ಹಿಂದಿ ಚಿತ್ರದಲ್ಲಿ 16 ಹರೆಯದ ಸ್ಕೂಲ್ ಹುಡುಗಿ ಪಾತ್ರದಲ್ಲಿ ಮೋಡಿ ಮಾಡಿದ ಚೆಲುವೆ. ಸಿನಿಮಾ ಅದ್ಯಾಕೋ ಹೆಚ್ಚು ಸುದ್ದಿ ಮಾಡಲಿಲ್ಲ. ಈಗ ಈ ಶೀನಾ ದಕ್ಷಿಣದ ಕಡೆಗೆ ಮುಖ ಮಾಡಿದ್ದಾಳೆ.
ಹೀಗೆ ದಕ್ಷಿಣದತ್ತ ಮುಖ ಮಾಡಿದ ಬಾಲಿವುಡ್ ನಟಿಯರ ಮೇಲೆ ನಮ್ಮ ಕನ್ನಡದ ನಿರ್ದೇಶಕರಿಗೆ ಅದ್ಯಾಕೋ ಹೆಚ್ಚು ಪ್ರೀತಿ ಎಂದು ವಿವರಿಸಿ ಹೇಳಬೇಕಿಲ್ಲ. ಅದಕ್ಕೆ ಸಾಕ್ಷಿ ಉತ್ತರದಿಂದ ಆಮದಾಗಿರುವ ಸಾಲು ಸಲು ನಟಿಯರು. ಈ ನಟಿಯರ ಸಾಲಿಗೆ ಈಗ ಮತ್ತೊಬ್ಬ ಸೇರ್ಪಡೆ ಈ ಶೀನಾ.
ಶೀನಾ ಈಗ ರಾಜಧಾನಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಘು ಹೇಳುವಂತೆ, ಅವರು ಕನ್ನಡದಲ್ಲೇ ನಾಯಕಿಯರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರಂತೆ. ಆದರೆ ಯಾರು ಸಿಕ್ಕಲೇ ಇಲ್ಲವಂತೆ. ಹಾಗಾಗಿ ಕೊನೆಗೂ ಸುಸ್ತಾಗಿ, ಚಿತ್ರದ ಅಱ್ಧ ಶೂಟಿಂಗ್ ಮುಗಿದ ಮೇಲೆ ಶೀನಾರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.
ಒಟ್ಟಾರೆ ಈಗಾಗಲೇ ತೆಲುಗಿನಲ್ಲೂ ಬಿಂದಾಸ್ ಎಂಬ ಚಿತ್ರವೊಂದರಲ್ಲಿ ನಟಿಸಿರುವ ಶೀನಾ ಬಾಲಿವುಡ್, ಟಾಲಿವುಡ್ ನಂತರ ಸ್ಯಾಂಡಲ್‌ವುಡ್ಡಿಗೆ ಕಾಲಿಟ್ಟಿದ್ದಾರೆ. ಎಲ್ಲಿ ಅದೃಷ್ಟ ಕೈಗೆಟಕುತ್ತೋ ಕಾಯಬೇಕು ಅಷ್ಟೆ.