ತಮಿಳಿನಲ್ಲಿ ಅನಿಯನ್ ಚಿತ್ರದ ಮೂಲಕ ಜನಪ್ರಿಯಳಾಗಿ ತಮಿಳು ಚಿತ್ರರಂಗದ ಯಶಸ್ವೀ ನಾಯಕಿಯಾಗಿ ಮೆರೆದ ಸದಾ ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸಿ ಹೋಗಿದ್ದುಂಟು. ಇದೀಗ ಬಹಳ ವರ್ಷಗಳ ನಂತರ ಮತ್ತೆ ಸದಾ ಕನ್ನಡಕ್ಕೆ ಬರುತ್ತಿದ್ದಾಳೆ. ವಿಶೇಷವೆಂದರೆ ಸದಾ ಈಗ ನಾಯಕಿಯಾಗಿ ಬರುತ್ತಿರುವುದು ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮೈಲಾರಿ ಚಿತ್ರಕ್ಕೆ!
ತಾಜ್‌ಮಹಲ್ ಚಿತ್ರದ ಖ್ಯಾತಿಯ ಆರ್. ಚಂದ್ರು ಮೈಲಾರಿ ಚಿತ್ರಕ್ಕಾಗಿ ಶಿವಣ್ಣ ಅವರನ್ನು ಆಯ್ಕೆ ಮಾಡಿದ್ದು ಗೊತ್ತೇ ಇದೆ. ಆದರೆ ನಾಯಕಿ ಯಾರು ಎಂಬ ಸಂಗತಿ ಈವರೆಗೂ ಹೊರಬಿದ್ದಿರಲಿಲ್ಲ. ಇದೀಗ ನಾಯಕಿ ಸದಾ ಎಂಬ ಮಾತು ಗಾಂಧಿನಗರದ ಗಲ್ಲಿಗಳಿಂದ ಪ್ರತಿಧ್ವನಿಸುತ್ತಿದೆ.
ಈ ಹಿಂದೆ ಇಂದ್ರಜಿತ್ ಲಂಕೇಶರ ಮೊನಾಲಿಸಾ, ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಮೋಹಿನಿ ಚಿತ್ರದಲ್ಲಿ ಸದಾ ನಟಿಸಿದ್ದರು. ಸದಾ ಇತ್ತೀಚೆಗಷ್ಟೆ ಬಾಲಿವುಡ್‌ಗೂ ಕಾಲಿಟ್ಟು ಅಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಬಂದಿದ್ದರು. ಆದರೆ ಯಾಕೋ ಅದೃಷ್ಟ ದೇವತೆ ಒಲಿಯಲಿಲ್ಲ.
ಇದೇ ಸಮಯದಲ್ಲಿ ಕನ್ನಡದಲ್ಲೂ ಅವಕಾಶದ ಬಾಗಿಲು ತೆರೆದಿದೆ. ಆದರೆ ಅದೃಷ್ಟದ ಬಾಗಿಲು ತೆರೆಯುತ್ತೋ ಕಾಯಬೇಕು.