ಅನಂತನಾಗ್ ನಟಿಸಿರುವ ನಾರದ ವಿಜಯ ಎಂಬ ಹಾಸ್ಯ ಪ್ರಧಾನ ಚಿತ್ರ ಈಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಅದೇ ಚಿತ್ರವನ್ನು ರಿಮೇಕ್ ಮಾಡಿಲ್ಲ. ಆ ಚಿತ್ರದ ಹೆಸರನ್ನು ಬಳಸಿಕೊಂಡು ನಿರ್ದೇಶಕ ಮಂಜು ದೈವಜ್ಞ ಹೊಸ ಕಥೆ ಹೆಣೆದು ಚಿತ್ರ ಮಾಡಿದ್ದಾರೆ.
ಇದೀಗ ಈ ಚಿತ್ರ ಬಿಡುಗಡೆಗೂ ಸಿದ್ಧವಾಗಿದೆ. ಇದೇ ಚಿತ್ರತಂಡದಿಂದ ಮತ್ತೊಂದು ಸುದ್ದಿಯೂ ಹೊರಬಂದಿದೆ. ಚಿತ್ರತಂಡ ಈಗ ಮತ್ತೊಂದು ಚಿತ್ರ ಮಾಡಲು ಹೊರಟಿದೆ. ಚಿತ್ರಕ್ಕಿನ್ನೂ ಹೆಸರಿಡಬೇಕಾಗಿದೆ. ನಾರದ ವಿಜಯದ ಮುಖ್ಯಪಾತ್ರದಲ್ಲಿ ಶಶಿಕುಮಾರ್ ನಟಿಸಿದ್ದಾರೆ. ಹೊಸ ಚಿತ್ರಕ್ಕೂ ಅವರೇ ನಾಯಕರು. ಇದು ಪ್ರೇಮಿಗಳ ಸುತ್ತ ಹಣೆದಿರುವ ಕಥೆ. ಕಾಲೇಜು ಹುಡುಗನ ಲವ್, ಹನಿಮೂನ್, ನಂತರ ಅನುಭವಿಸುವ ಪಾಡು ಎಲ್ಲವೂ ಇಲ್ಲಿದೆಯಂತೆ.
ಈ ಚಿತ್ರದಲ್ಲಿ ಹಾಸ್ಯವೇ ಪ್ರಧಾನ. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಸಿಂಗಾಪೂರ್ ಹಾಗೂ ಮಲೇಷಿಯಾದಲ್ಲಿ ನಡೆಯಲಿದೆ. ನಾಯಕಿಯಾಗಿ ಬಿರುಗಾಳಿಯ ಸಿಂಚನಾ ನಟಿಸಲಿದ್ದಾರೆ. ಉಳಿದಂತೆ ಥ್ರಿಲ್ಲರ್ ಮಂಜು, ರವಿ ಚೇತನ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಅಂದ ಹಾಗೆ ಚಿತ್ರವು ಮುಂದಿನ ತಿಂಗಳ ಕೊನೆಯಲ್ಲಿ ಸೆಟ್ಟೇರಲಿದೆ.