ಯೋಗರಾಜ್ ಭಟ್ಟರು ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡುತ್ತಾರೆ. ಅದಕ್ಕೆ ಮುಂಗಾರು ಮಳೆ ಕನ್ನಡ ಚಿತ್ರರಂಗದ ಬರಗಾಲ ನೀಗಿಸಿದ ಮೇಲೆ ಜನರಿಗೆ ಅವರ ಚಿತ್ರದ ಬಗ್ಗೆ ಕೊಂಚ ಕುತೂಹಲ ಅಧಿಕವೇ. ಇದೀಗ ಅವರ ಪಂಚರಂಗಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಮೊದಲ ಹಂತವಾಗಿ ಮಂಗಳೂರಿನಿಂದ ಮಲ್ಪೆವರೆಗೆ ಯಶಸ್ವಿ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಎಲ್ಲವೂ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ಭಟ್ಟರಿಗೆ ತೃಪ್ತಿ ಇದೆ. ನಾವೀಗ ಕೊಡಲಿರುವ ಪಂಚರಂಗಿಯನ್ನು ಜನ ಖಂಡಿತ ತೆಗೆದುಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ. ಅದಕ್ಕಾಗಿ ಶೀಘ್ರದಲ್ಲಿ ಪಂಚರಂಗಿಯನ್ನು ಪ್ರೇಕ್ಷಕರ ಮುಂದೆ ಇಡುವ ತವಕದಲ್ಲಿದ್ದಾರೆ ಭಟ್ಟರು.
ನಿದ್ದೆ, ಅಪ್ಪ-ಅಮ್ಮ, ಪ್ರೇಮ ಪ್ರಕರಣ, ಮದುವೆ ಹಾಗೂ ಮಕ್ಕಳು ಎಂಬವೆಲ್ಲಾ ಒಂದೊಂದು ಬಣ್ಣವನ್ನು ಪ್ರತಿಬಿಂಬಿಸುವುದೇ ಪಂಚರಂಗಿ. ಜೀವನದ ಐದು ಪ್ರಮುಖ ವಿಚಾರಗಳನ್ನು ಐದು ಬಣ್ಣಗಳಂತೆ ಪಂಚರಂಗಿಯಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಭಟ್ಟರು. ಇವುಗಳಲ್ಲಿ ಕಪ್ಪು ಬಣ್ಣಕ್ಕೆ ಹೆಚ್ಚಿನ ಆದ್ಯತೆ. ಇದು ಯಾವ ಅಂಶವನ್ನು ತೋರಿಸಲಿದೆ ಎಂಬುದು ಮಾತ್ರ ನಿಗೂಢ. ನಗು, ತಮಾಷೆ, ವ್ಯಂಗ್ಯ- ವಿಡಂಬನೆ, ಕಾಲೆಳೆತ ಇವೆಲ್ಲವೂ ಪಂಚರಂಗಿಯಲ್ಲಿದೆಯಂತೆ!
ಚಿತ್ರದಲ್ಲಿ ಪಂಚರಂಗಿಯಾಗಿ ನಿಧಿ ಸುಬ್ಬಯ್ಯ ಅಭಿನಯಿಸುತ್ತಿದ್ದಾರೆ. ನಾಯಕ ದಿಗಂತ್. ನಿಧಿ ಇದುವರೆಗೂ ಯಾರೂ ಊಹಿಸದ ಪಾತ್ರ ನಿರ್ವಹಿಸಿದ್ದಾರಂತೆ. ಮನೋಮೂರ್ತಿಯವರ ಸಂಗೀತ ಕೂಡ ಸೇರಿಸಿ ಚಿತ್ರಕ್ಕೆ ಹೆಚ್ಚು ತೂಕ ಸಿಗುವುದರಲ್ಲಿ ಅನುಮಾನವಿಲ್ಲ ಎಂಬುದು ಚಿತ್ರತಂಡದ ಅಭಿಪ್ರಾಯ.