ಡಾ|ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರ ತೆಲುಗಿಗೆ ಮೊದಲು ರಿಮೇಕ್ ಆಗುತ್ತಿರುವ ಸಂಗತಿ ಈಗಾಗಲೇ ಗೊತ್ತಿದೆ. ವಿಷ್ಣುವರ್ಧನ್ ಪಾತ್ರದಲ್ಲಿ ತೆಲುಗು ನಟ ವೆಂಕಟೇಶ್ ಅಧಿಕೃತವಾಗಿ ಆಯ್ಕೆಯಾಗಿದ್ದೂ ಗೊತ್ತಿದೆ. ಇದೀಗ ನಾಯಕಿ ಪಾತ್ರಕ್ಕೆ ತೆಲುಗು ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಮುಖ ನಾಗವಲ್ಲಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ಮಿಂಚಲಿದ್ದಾರೆ.
ಈಗಾಗಲೇ ಅರುಂಧತಿ ಎಂಬ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ಅನುಷ್ಕಾ ಶೆಟ್ಟಿ ಬೆಂಗಳೂರು ಬಾಲೆ. ಆದರೆ ಕೆರಿಯರ್ ಆರಂಭಿಸಿದ್ದು ತೆಲುಗಿನಲ್ಲಿ. ಮೂಲತಃ ಈಕೆ ಯೋಗ ಟೀಚರ್. ತೆಲುಗಿನಲ್ಲಿ ಪ್ರೀತಿಯಿಂದ ಸ್ವೀಟಿ ಎಂದೇ ಕರೆಯಲ್ಪಡುವ ಅನುಷ್ಕಾರ ಅರುಂಧತಿ ಚಿತ್ರದ ನಟನೆಗೆ ಸಾಕಷ್ಟು ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ದಿನ ಬೆಳಗಾಗುವುದರಲ್ಲಿ ಅರುಂಧತಿ ಚಿತ್ರದ ಮೂಲಕ ತೆಲುಗಷ್ಟೇ ಅಲ್ಲ, ದಕ್ಷಿಣದಲ್ಲಿ ಮನೆಮಾತಾಗಿ ಬಾಲಿವುಡ್ಡಿಗರನ್ನೂ ಬೆಕ್ಕಸ ಬೆರಗಾಗಿಸಿದ ನಟಿ.
ಮೂಲಗಳ ಪ್ರಕಾರ, ಅನುಷ್ಕಾ ಇತ್ತೀಚೆಗಷ್ಟೇ ಆಪ್ತರಕ್ಷಕ ಚಿತ್ರವ್ನನು ವಿಶೇಷ ಪ್ರದರ್ಶನದಲ್ಲಿ ವೀಕ್ಷಿಸಿದ್ದಾರೆ. ನಟ ವೆಂಕಟೇಶ್ ಕೂಡಾ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅನುಷ್ಕಾ ಚಿತ್ರ ನೋಡಿ ತಾನು ಆ ಪಾತ್ರ ಮಾಡುವುದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಮಾಡುತ್ತಿರುವ ಕೋಟಿ ಅವರೂ ಚಿತ್ರ ವೀಕ್ಷಿಸಿದ್ದಾರೆ. ಆಪ್ತರಕ್ಷಕ ನಿರ್ದೇಶಿಸಿದ ಪಿ. ವಾಸು ಅವರೇ ತೆಲುಗಿನಲ್ಲೂ ಚಂದ್ರಮುಖಿ-2 ನಿರ್ದೇಶಿಸಲಿದ್ದಾರೆ.