ಮುದ್ದು ಮುಖದ ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗೆ ಬೆಂಗಳೂರಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಕುರ್ಚಿ ಮೇಲೆ ಕೂತಿದ್ದಾಗಲೇ ದೊಪ್ಪನೆ ಕೆಳಕ್ಕೆ ಬಿದ್ದರು. ಬೀಳಲು ಕಾರಣ ಕುರ್ಚಿಯೇ ಮುರಿದಿತ್ತು!
ಹೌದು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಮ್ಯಾಚ್‌ನಲ್ಲಿ ಬೆಂಗಳೂರು ತಂಡಕ್ಕೆ ಜೈ ಹೋ ಎಂದು ಕೂಗಲು ನಟಿ ರಮ್ಯಾ ಜೊತೆಗೆ ಹರ್ಷಿಕಾ ಪೂಣಚ್ಚ ಕೂಡಾ ಬಂದಿದ್ದರು. ಕೆಂಪಾದ ರಾಯಲ್ ಚಾಲೆಂಜರ್ಸ್ ಟೀ ಶರ್ಟ್ ತೊಟ್ಟು ಅದಕ್ಕೆ ಮ್ಯಾಚ್ ಆಗುವಂತೆ ಕೆಂಪನೆಯ ಹೇರ್‌ಬ್ಯಾಂಡ್ ಧರಿಸಿ ಕ್ಯೂಟಾಗಿ ಬಂದು ಸ್ಟೈಲಾಗಿ ಸೀಟಿನಲ್ಲಿ ಕೂತಿದ್ದರು. ಕೂತ ಸೀಟೇನೂ ಅಗ್ಗದ್ದಲ್ಲ. ದುಬಾರಿ ವಿಐಪಿ ಸೀಟು. ಆಕೆ ಕೂತ ಗ್ಯಾಲರಿಯಿಡೀ ಜನರಿಂದ ಭರ್ತಿಯಾಗಿತ್ತು. ನಟಿ ರಮ್ಯಾ ಕೂಡಾ ಚೀಯರ್ಸ್ ಹೇಳಲು ಅಲ್ಲೇ ಕೂತಿದ್ದರು. ಅದೇನಾಯಿತೋ ಏನೋ, ಇದ್ದಕ್ಕಿದ್ದಂತೆ ಹರ್ಷಿಕಾ ಕೂತ ಕುರ್ಚಿ ಮುರಿದು ಕೆಳಗೆ ಬಿತ್ತು. ಜೊತೆಗೆ ಹರ್ಷಿಕಾ ಕೂಡಾ. ಅದ್ಹೇಗೋ ಸಾವರಿಸಿಕೊಂಡು ಮೇಲೆದ್ದ ಹರ್ಷಿಕಾ ಮುಖವೂ ಕೆಂಪಾಗಿತ್ತು. ಎಲ್ಲರೂ ಮ್ಯಾಚ್ ನೋಡೋದು ಬಿಟ್ಟು ಹರ್ಷಿಕಾಗೇನಾಯ್ತಪ್ಪ ಅಂತ ಆಕೆಯನ್ನೇ ನೋಡತೊಡಗಿದರು. ಆಗ ಹರ್ಷಿಕಾ ಮಾತ್ರ ನನಗೀ ಕುರ್ಚಿ ಸಹವಾಸವೇ ಬಡಪ್ಪಾ ಅಂದುಕೊಂಡು ಅಲ್ಲೇ ನೆಲದಲ್ಲೇ ಮಸ್ತಾಗಿ ಕೂತು ತಂಡಕ್ಕಾಗಿ ಹುರ್ರೇ.. ಎನ್ನತೊಡಗಿದರು.
ಆದರೂ ಆಕೆ ಮಾತ್ರ, ಇದು ಭಾರತ ನೋಡಿ. ದೊಡ್ಡ ಪಂದ್ಯವೇ ನಡೆಯುತ್ತಿರುವ ಸಂದರ್ಭದಲ್ಲಿ ಇಂಥದ್ದೆಲ್ಲಾ ದೊಡ್ಡ ವಿಷಯವಲ್ಲ. ಆದರೂ ಇಂಥ ಸಂದರ್ಭಗಳನ್ನು ಮರೆಯಲು ಸಾಧ್ಯವಿಲ್ಲ. ಇದೊಂದು ಸಣ್ಣ ಉದಾಹರಣೆ ಅಷ್ಟೇ ಎಂದರು ಹರ್ಷಿಕಾ.
ರಮ್ಯಾ ಕೂಡಾ ಹರ್ಷಿಕಾಗೆ ದನಿಗೂಡಿಸಿ. ಹೌದು. ಇಂಥ ಘಟನೆಗಳಿಂದ ಮನಸ್ಸಿಗೆ ನೋವಾಗುತ್ತೆ ಎಂದರು. ಅಲ್ಲೇ ಪಕ್ಕದಲ್ಲಿ ಕೂತ ಮತ್ಯಾರೋ ಕ್ರಿಕೆಟ್ ಅಭಿಮಾನಿಗಳಂತೂ, ನೋಡಿ ಸ್ವಾಮಿ, ಇದು ವಿಐಪಿ ಸೀಟು, ಇಡೀ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಅತ್ಯಂತ ಹೆಚ್ಚು ಬೆಲೆಯಿರುವ ಸೀಟಿದು. ಆದರೂ ನೋಡಿ ಸೀಟಿಗೆ ಬೆಲೆನೇ ಇಲ್ವಲ್ಲಾ ಅಂದ್ರು. ಅದೆಲ್ಲಾ ಹಾಗಿರಲಿ. ಬೆಂಗಳೂರು ತಂಡವಂತೂ ಭರ್ಜರಿ ವಿಜಯ ಸಾಧಿಸಿತು ಅನ್ನೋದನ್ನು ಮತ್ತೆ ಹೇಳಬೇಕಾಗಿಲ್ಲ. ಪಾಪ ಹರ್ಷಿಕಾ..!