ನಟ ಪ್ರಕಾಶ್ ರೈ ಇದೀಗ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ನಾನು ನನ್ನ ಕನಸು ಚಿತ್ರದ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕಾರ್ಯವನ್ನೂಲ ಪೂರ್ಣಗೊಳಿಸಿದ್ದಾರೆ. ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಇದೀಗ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದ್ದು, ಪ್ರಕಾಶ್ ರೈ ತೃಪ್ತ ಮನಸ್ಸಿನಿಂದ ಹೈದರಾಬಾದಿಗೆ ತಮ್ಮ ಮತ್ತೊಂದು ಚಿತ್ರದ ಶೂಟಿಂಗ್‌ಗಾಗಿ ತೆರಳಿದ್ದಾರೆ.
ನಾನು ನನ್ನ ಕನಸು ಚಿತ್ರದ ಮೊದಲ ಹಂತದ ಎಡಿಟಿಂಗ್ ಕಾರ್ಯವೂ ಮುಕ್ತಾಯಗೊಂಡಿದೆ. ಚಿತ್ರತಂಡದ ಬಗ್ಗೆ, ಅಮೂಲ್ಯ ಬಗ್ಗೆ ಪ್ರಕಾಶ್ ರೈ ಪ್ರಶಂಸೆಯ ಸುರಿಮಳೆಯನ್ನೇ ಗೈಯುತ್ತಾರೆ. ಅಮೂಲ್ಯರನ್ನು ಖಂಡಿತವಾಗಿಯೂ ಈ ಚಿತ್ರ ನೋಡಿದ ಮೇಲೆ ಜನತೆ ತಮ್ಮ ಮನೆಮಗಳಂತೆ ಕಾಣುತ್ತಾರೆ. ಆಕೆಗೊಂದು ಉತ್ತಮ ಇಮೇಜನ್ನು ಈ ಸಿನಿಮಾ ಸೃಷ್ಟಿಸಲಿದೆ. ಖಂಡಿತವಾಗಿಯೂ ಕುಟುಂಬ ಸಮೇತರಾಗಿ ಎಲ್ಲರೂ ಬಂದು ನೋಡಬಹುದಾದ ಚಿತ್ರವಿದು ಎನ್ನುತ್ತಾರೆ ಪ್ರಕಾಶ್ ರೈ.
ತಮಿಳಿನಲ್ಲಿ ಅಭಿಯುಮ್ ನಾನುಂ ಚಿತ್ರ ಮಾಡುವಾಗ ನಿರ್ದೇಶಕ ರಾಧಾ ಮೋಹನ್ ಜೊತೆಗೆ ಕಥೆಯ ಬಗ್ಗೆ, ಚಿತ್ರದ ಬಗ್ಗೆ ಸಾಕಷ್ಟು ಚರ್ಚಿಸಿರುವುದರಿಂದ ಈ ಕಥೆಯ ಕಟ್ಟುವಿಕೆಯಲ್ಲೂ ನಾನು ಪಾಲ್ಗೊಂಡಿದ್ದೇನೆ. ಹಾಗಾಗಿ ಕನ್ನಡದ್ಲಲೂ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿಟ್ಟಿದ್ದೇನೆ. ಜೊತೆಗೆ ನನ್ನ ಜೊತೆ ಈ ಚಿತ್ರಕ್ಕಾಗಿ ಕೆಲಸ ಮಾಡುವ ಎಲ್ಲರಿಂದ ಉತ್ತಮ ಕೆಲಸ ನಿರೀಕ್ಷಿಸಿದ್ದೆ. ಹಾಗೆಯೇ ನನ್ನಂತೆ ರಂಗಭೂಮಿಯ ತಳಹದಿಯಿದ್ದಂಥ ರಾಜೇಶ್, ಅಚ್ಯುತ, ವೀಣಾ ಸುಂದರ್ ಎಲ್ಲರೂ ಕೂಡಾ ತುಂಬ ಸುಂದರವಾಗಿ ನಟಿಸಿದ್ದಾರೆ. ಚಿತ್ರದ ತಾಂತ್ರಿಕ ವರ್ಗವೂ ಕೂಡಾ ಸಾಕಷ್ಟು ಮನಸ್ಸಿಟ್ಟು ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಈ ಬಗ್ಗೆ ಖುಷಿಯಿದೆ ಎನ್ನುತ್ತಾರೆ ರೈ.
ಹಂಸಲೇಖಾ ಅವರ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡುವ ಪ್ರಕಾಶ್ ರೈ, ಖಂಡಿತವಾಗಿಯೂ ನಾನು ನನ್ನ ಕನಸು ಚಿತ್ರ ಹಂಸಲೇಖಾ ಅವರ ವೃತ್ತಿ ಜೀವನಕ್ಕೆ ಮತ್ತೆ ಬ್ರೇಕ್ ನೀಡಲಿದೆ. ಕೆಲವು ಉತ್ತಮ ಸಾಹಿತ್ಯ ರಚಿಸಿರುವ ಅವರು ಉತ್ತಮವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎನ್ನುತ್ತಾರೆ ಪ್ರಕಾಶ್ ರೈ.
ಪ್ರಕಾಶ್ ರೈ ಅವರ ಕನಸಿನ ಕೂಸು ನಾನು ನನ್ನ ಕಸು ಚಿತ್ರ ಸದ್ಯದಲ್ಲೇ ತೆರೆಗೂ ಬರಲಿದೆ. ರೈ ಕನಸು ನನಸಾಗುತ್ತೋ ಕಾಯಬೇಕು.